ಮಂಗಳೂರು: ಕರಾವಳಿಯಲ್ಲಿ ಆರೋಗ್ಯ ಇಲಾಖೆಯೊಂದು ಬಿಡುಗಡೆ ಮಾಡಿರುವ ವರದಿ ಮಕ್ಕಳ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 4 ಸಾವಿರ ಮಕ್ಕಳಲ್ಲಿ ದೃಷ್ಟಿ ದೋಷ ಸಮಸ್ಯೆ ಇದ್ದು ಬಳಲುತ್ತಿದ್ದಾರೆ ಎಂದು ವರದಿಯಿಂದ ಸಾಬೀತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಮಕ್ಕಳು ದೃಷ್ಟಿ ದೋಷದ ಸಮಸ್ಯೆಗೆ ತುತ್ತಾಗಿದ್ದಾರೆ. 4398 ಮಕ್ಕಳಲ್ಲಿ ಗಂಭೀರ ದೃಷ್ಟಿ ದೋಷದ ಸಮಸ್ಯೆಯಿರೋದು ದೃಢಪಟ್ಟಿದೆ. ಈ ಪೈಕಿ 2066 ಮಕ್ಕಳಿಗೆ ಕಡ್ಡಾಯ ಕನ್ನಡಕ ಧರಿಸುವ ಅಗತ್ಯವಿದೆ ಎಂದು ಹೇಳಲಾಗಿದೆ. 1376 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1,45,951 ಮಕ್ಕಳನ್ನು ರಾಷ್ಟ್ರೀಯ ಅಂಧತ್ವ ನಿವಾರಣಾ ಯೋಜನೆಯಡಿ ತಪಾಸಣೆ ಮಾಡಲಾಗಿದ್ದು, ಸಮಸ್ಯೆಯ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಅತಿಯಾದ ಮೊಬೈಲ್ ಬಳಕೆ ಹಾಗೂ ಟಿವಿ ವೀಕ್ಷಣೆಯಿಂದ ಮಕ್ಕಳಲ್ಲಿ ದೃಷ್ಟಿ ದೋಷ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ಮಾನಸಿಕ ಸಮಸ್ಯೆಗಳು ಕೂಡಾ ತಲೆದೋರುತ್ತಿದೆ.

