ಭಾರತ ಅಂದ್ರೆ ದೇಗುಲಗಳ ಬೀಡು….ಸಂಸ್ಕೃತಿ, ಸಂಪ್ರದಾಯದ ತವರೂರು. ಅದರಲ್ಲೂ ಕರಾವಳಿಯಲ್ಲಿ ಜನ ದೇವರು, ದೈವಗಳ ಮೇಲಿಟ್ಟಿರುವ ಅಚಲ ನಂಬಿಕೆಗೆ ಇಲ್ಲಿನ ಆಚರಣೆಗಳೇ ಪ್ರತ್ಯಕ್ಷ ನಿದರ್ಶನ….ಇನ್ನೇನೂ ಸಾಲು ಸಾಲು ಹಬ್ಬಗಳ ಆಗಮನವಾಗ್ತಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ನಾಗರ ಪಂಚಮಿಯನ್ನು ಆಚರಿಸುತ್ತೇವೆ. ಹಿಂದೂಗಳ ಮೊದಲ ಹಬ್ಬವೆಂದೇ ಹೇಳಬಹುದು. ಈ ಸಮಯದಲ್ಲಿ ನಾಗ ದೇವರನ್ನು ಪೂಜಿಸುವುದರಿಂದ ಕಾಳಸರ್ಪ ದೋಷ ಮತ್ತು ಇತರ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇನ್ನೂ ಜೀವಂತವಾಗಿದೆ.




ನಾಗರಪಂಚಮಿಯ ದಿನ ನಾಗದೇವರಿಗೆ ಹಸುವಿನ ಹಸಿ ಹಾಲನ್ನು ಭಕ್ತಿ ಭಾವದಿಂದ ಎರೆಯಲಾಗುತ್ತದೆ. ಅವರವರ ನಂಬಿಕೆಗೆ ಅನುಗುಣವಾಗಿ ವಿವಿಧ ರೀತಿಯಲ್ಲಿ ಈ ನಾಗರಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಕರಾವಳಿಯಲ್ಲಿ ನಾಗರಪಂಚಮಿಯ ದಿನ ನಾಗತಂಬಿಲ ಸೇವೆ ನೀಡುವುದು ವಾಡಿಕೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ 14 ಸಾವಿರಕ್ಕೂ ಅಧಿಕ ನಾಗಬನಗಳಿದ್ದು, ಇವುಗಳಲ್ಲಿ 11 ಸಾವಿರಕ್ಕೂ ಅಧಿಕ ಕುಟುಂಬಕ್ಕೆ ಸಂಬಂಧಪಟ್ಟ ನಾಗಬನಗಳು, ಕುಟುಂಬದ ನಾಗಬನಗಳಲ್ಲಿ ಒಂದೇ ದಿನ ಕನಿಷ್ಠ 75 ರಿಂದ 200 ನಾಗತಂಬಿಲ ಸೇವೆಗಳು ನಡೆಯುತ್ತಿವೆ.




ಇನ್ನು ಕುಟುಂಬದ ನಾಗಬನಗಳಲ್ಲಿ ನಡೆಯುವ ತಂಬಿಲ ಸೇವೆಗೆ ಭಕ್ತಾದಿಗಳೇ ಪರಿಕರಗಳನ್ನು ತರುತ್ತಿದ್ದು, ಇದರಿಂದ ನಾಗರ ಪಂಚಮಿ ಮುಗಿದ ಬಳಿಕ ನಾಗಬನ ಆಸುಪಾಸು ಪ್ಲಾಸ್ಟಿಕ್ಮಯವಾಗುತ್ತಿದೆ. ಈ ಪ್ಲಾಸ್ಟಿಕ್ಗಳೇ ಕೃಷಿ, ಭೂಮಿ, ಹಳ್ಳ ತೋಡು, ಸಾಗರ ಸೇರಿ ಪರಿಸರಕ್ಕೆ ಹಾನಿಯಾಗುತ್ತಿದೆ. ತಂಬಿಲ ಸೇವೆಗೆ ಅರಳು, ಅವಲಕ್ಕಿ, ಅರಸಿನ, ತುಪ್ಪ, ಜೇನುತುಪ್ಪ, ಬೆಳ್ತಿಗೆ ಅಕ್ಕಿ, ಬೆಲ್ಲವನ್ನು ಪ್ಲಾಸ್ಟಿಕ್ನಲ್ಲೇ ಕಟ್ಟಿ ತರಲಾಗುತ್ತಿದ್ದು, ನಾಗಬನದಲ್ಲಿ 100 ತಂಬಿಲ ಸೇವೆಯಿದ್ದರೆ, 700ಕ್ಕೂ ಅಧಿಕ ಪ್ಲಾಸ್ಟಿಕ್ ತೊಟ್ಟೆ, ಬಾಟಲಿಗಳು ರಾಶಿ ಬೀಳುತ್ತವೆ. ಇದೇ ರೀತಿ ರಾಜ್ಯದ 15 ಸಾವಿರ ನಾಗಬನದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಕೆಲವು ಟನ್ಗಳಾಗಿ ಪರಿಸರ ಸೇರುತ್ತವೆ. ಆದ್ದರಿಂದ ಈ ಬಾರಿ ನಾಗರಪಂಚಮಿ ಪ್ಲಾಸ್ಟಿಕ್ ಮುಕ್ತವಾಗಿರಲಿ ಎಂಬ ಕರೆ ನೀಡಲಾಗುತ್ತಿದೆ.




ಇನ್ನು ನಾಗರಪಂಚಮಿಯ ದಿನ ಕರಾವಳಿಯಲ್ಲಿ ವಿಶೇಷವಾಗಿ ಅರಿಶಿನ ಎಲೆಯ ಕಡುಬು ಮಾಡಿ ಸೇವಿಸಲಾಗುತ್ತದೆ. ಮಳೆಗಾಲದಲ್ಲಿ ಬರುವ ಮೊದಲ ಹಬ್ಬ ಇದಾಗಿರುವುದರಿಂದ ಅರಿಶಿನ ಎಲೆಯಲ್ಲಿ ಕಡುಬು ಮಾಡಿ ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಅಂತಾರೆ ಹಿರಿಯರು.




ಒಟ್ಟಾರೆಯಾಗಿ ನಾಗರಪಂಚಮಿ ಹಬ್ಬದ ಒಂದು ವಾರದ ಮುಂಚೆಯೇ ಹಲವಾರು ರೀತಿಯಲ್ಲಿ ಸಿದ್ಧತೆ ನಡೆಸಿ ಈ ದಿನ ನಾಗದೇವರ ಪೂಜೆಯಲ್ಲಿ ಶಾಸ್ತ್ರೋಕ್ತವಾಗಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗೋದು ಹಿಂದೂಗಳ ಭಕ್ತಿ ಕಾಯಕವಾಗಿದೆ. ಮಗದೊಮ್ಮೆ ಎಲ್ಲರಿಗೂ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು..








