ಉಡುಪಿ : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪತಿಷ್ಠಾನ ವತಿಯಿಂದ ಆಗಸ್ಟ್ 1 ಮತ್ತು 2ರಂದು ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ ಮೂಡುಬಿದಿರೆ ವಿದ್ಯಾಗಿರಿ ಆವರಣದಲ್ಲಿ ಆಯೋಜಿಸಲಾಗಿದೆ.
ಪತ್ರಿಕೋದ್ಯಮ ಸೇರಿದಂತೆ ವಿವಿಧ 13 ವಲಯಗಳು ಭಾಗವಹಿಸಲಿದ್ದು, 302 ಕಂಪೆನಿಗಳ ಭಾಗವಹಿಸುವಿಕೆ ಖಾತ್ರಿಯಾಗಿದೆ. ಈಗಾಗಲೇ 16 ಸಾವಿರಕ್ಕೂ ಅಧಿಕ ಮಂದಿ ಉದ್ಯೋಗಾರ್ಥಿಗಳು ನೋಂದಾಯಿಸಿದ್ದಾರೆ ಎಂದು ಪತ್ರಿಕೋದ್ಯಮ ಮತ್ತು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ 15ನೇ ವರ್ಷದ ಆಳ್ವಾಸ್ ಪ್ರಗತಿ ಆಯೋಜಿಸಲಾಗುತ್ತಿದ್ದು ವಿವಿಧ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾಮೆಡಿಕಲ್, ಇಂಜಿನಿಯರಿಂಗ್, ಕಲೆ, ವಾಣಿಜ್ಯ ಹಾಗೂ ಮ್ಯಾನೇಜ್’ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ- ಎಸ್ಎಸ್ಎಲ್.ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ.
2025ರ ಶೈಕ್ಷಣಿಕ ವರ್ಷದ ಮುಂಚೆ ಯಾವುದೇ ಕೋರ್ಸುಗಳನ್ನು ಪೂರ್ಣಗೊಳಿಸಿದವರು ಮತ್ತು ಪೂರ್ಣಗೊಳಿಸುವವರು ಹಾಗೂ ಅನುಭವಿ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಮುಕ್ತವಾಗಿ ಭಾಗವಹಿಸಬಹುದು.
ಎಸ್ಎಸ್ಎಲ್.ಸಿ ಹಾಗೂ ಪಿಯುಸಿ 3,012, ಐಟಿಐ ಹಾಗೂ ಡಿಪ್ಲೋಮಾ 4,350, ಯಾವುದೇ ಪದವಿ 3,847, ಬಿಇ/ಬಿಟೆಕ್ 805, ಕೋರ್ ಐಟಿ- 119, ಮೆಡಿಕಲ್ ಹಾಗೂ ಪ್ಯಾರಾಮೆಡಿಕಲ್ 709, ಯಾವುದೇ ಸ್ನಾತಕೋತ್ತರ/ ಎಂಬಿಎ 1,446, ಬಿಕಾಂ ಹಾಗೂ ಬಿಬಿಎ 1,176, ಗಲ್ಫ್ ರಾಷ್ಟ್ರ 316 ಉದ್ಯೋಗದ ಅವಕಾಶ ಇರಲಿದೆ.
ಕಳೆದ ಬಾರಿಯ ಉದ್ಯೋಗ ಮೇಳದಲ್ಲಿ 2,568 ಮಂದಿಗೆ ಸ್ಥಳದಲ್ಲೇ ಉದ್ಯೋಗ ಲಭಿಸಿದ್ದು, 5,452 ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆ ಇದೆ. ಸುಮಾರು 100 ಮಂದಿಯನ್ನೊಳಗೊಂಡ ತಂಡ ಪ್ರಗತಿ ಪರಿಶೀಲನೆ ನಡೆಸಲಿದೆ ಎಂದು ಪ್ರಸಾದ್ ಶೆಟ್ಟಿ ತಿಳಿಸಿದರು.
ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಆಕಾಂಕ್ಷಿಗಳಿಗೆ ಜು.31ರಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ/ ಡಿಪ್ಲೋಮಾ ಅಭ್ಯರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
ನೋಂದಣಿ, ಪಾಲ್ಗೊಳ್ಳುವ ಕಂಪೆನಿಗಳ ವಿವರಗಳಿಗಾಗಿ http://www.alvaspragati.com ವೆಬ್ಸೈಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ 9741440490 ಅಥವಾ 7975223865 ಯಾ 9611750531ನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ತರಬೇತಿ ಮತ್ತು ನಿಯೋಜನೆ ಮುಖ್ಯಸ್ಥೆ ರಂಜಿತಾ ಆಚಾರ್ಯ ಇದ್ದರು.

