ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನ ಹಾಗೂ ಗ್ರಾಮೀಣ ಸಂಸ್ಕೃತಿ ಸೊಗಡನ್ನು ಅನಾವರಣಗೊಳಿಸುವ ಉದ್ದೇಶದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕೆಸರುಗದ್ದೆ ಕ್ರೀಡಾಕೂಟ ‘ಗಮ್ಮತ್ತ್’ನ್ನು ಆಗಸ್ಟ್ 3ರ ರವಿವಾರ ಬೆಳಿಗ್ಗೆ 9ರಿಂದ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಜೆಎನ್ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಅಧ್ಯಕ್ಷ ಶರತ್ ಶೆಟ್ಟಿ ಉಪ್ಪುಂದ ಮಾತನಾಡಿ ಸಮಾನ ಮನಸ್ಕರ ತಂಡ ಒಂದುಗೂಡಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ಕಳೆದೊಂದು ವರ್ಷದಿಂದ ಅದ್ದೂರಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದು, ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಸಂಬಂಧಿಸಿ ವಿವಿಧ ಬಗೆಯ ಗ್ರಾಮೀಣ ಕ್ರೀಡಾಕೂಟ ಇರಲಿದೆ. ಗೆದ್ದವರಿಗೆ ನಗದು, ಪ್ರಶಸ್ತಿ ಕೂಡಾ ಸಿಗಲಿದೆ.
ಇನ್ನು ಆ.3ರ ಬೆಳಿಗ್ಗೆ 9ಕ್ಕೆ ರಾಹುತನಕಟ್ಟೆಯಿಂದ ಜೆಎನ್ಆರ್ ಹಾಲ್ ತನಕ ವೈಭವದ ಮೆರವಣಿಗೆ ಇರಲಿದ್ದು, ಕಂಬಳ ಕೋಣಗಳು, ಭಜನಾ ತಂಡಗಳು, ಎತ್ತಿನಗಾಡಿ, ಯಕ್ಷಗಾನ ವೈಭವ, 2 ಚಂಡೆ ತಂಡಗಳು ಮೆರವಣಿಗೆ ಸೊಬಗು ಹೆಚ್ಚಿಸಲಿದೆ. ೩೫ ಕೋಣಗಳ ಕಂಬಳ ಕೂಟವೂ ಇರಲಿದೆ. ಜೊತೆಗೆ ವಿವಿಧ ಬಗೆಯ ಖಾದ್ಯಗಳು, ಸಿನಿತಾರೆಯರು ಮುಖ್ಯ ಆಕರ್ಷಣೆಯಾಗಿದ್ದು ಹಬ್ಬದ ವಾತಾವರಣ ಮೇಳೈಸಲಿದೆ ಎಂದು ಹೇಳಿದರು.


