ಕುಂದಾಪುರ: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಚಿತ್ರ ಕನ್ನಡ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದದ್ದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಮೈನವಿರೇಳಿಸುವ ಕಂಬಳ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅದರಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ.
ಬೋಳಂಬಳ್ಳಿ ಚೈತ್ರಾ ಪರಮೇಶ್ವರ ಭಟ್ ಅವರ ಕೋಣ ಇದಾಗಿದ್ದು ಸಾಂಪ್ರದಾಯಿಕ ಕಂಬಳಗಳಲ್ಲಿ ನಿರಂತರವಾಗಿ ಐದು ವರ್ಷ ಚಾಂಪಿಯನ್ ಪಟ್ಟಕ್ಕೇರಿತ್ತು.
ಬೆಂಗಳೂರು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹರಿಸಿ ಪ್ರಥಮ ಪ್ರಶಸ್ತಿ ಪಡೆದಿತ್ತು. ಬಂಟ್ವಾಳ, ಮುಲ್ಕಿ ಮತ್ತು ಮಂಗಳೂರು ಕಂಬಳಗಳಲ್ಲಿ ಪ್ರಶಸ್ತಿ ಪಡೆದಿದ್ದ ಅಪ್ಪು ಕೋಣ ನಿಧನವಾಗಿದ್ದು ಕಂಬಳ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.


