ಮೈಸೂರು: ಕರ್ನಾಟಕ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಿಸಿದ್ದಾರೆ. ಮಕ್ಕಳ ಆರೋಗ್ಯ ಹಾಗೂ ಪೌಷ್ಠಿಕಾಂಶ, ಮಕ್ಕಳ ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ಕ್ರೀಡೆಗಳ ಅಭಿವೃದ್ಧಿ, ವಿಶೇಷ ಮಕ್ಕಳ ಸೇವೆ, ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯಂತಹ ವಿಭಾಗಗಳಲ್ಲಿ ಕನಿಷ್ಠ ಐದು ವರ್ಷಗಳ ಕಾಲ ನಿರಂತರ ಮತ್ತು ಪರಿಣಾಮಕಾರಿ ಸೇವೆ ಸಲ್ಲಿಸಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
ಆಯ್ಕೆಯಾದ ವ್ಯಕ್ತಿಗೆ ರೂ.25,000 ನಗದು
ಪ್ರತಿ ವರ್ಷ ಮಕ್ಕಳ ದಿನಾಚರಣೆಯ ಅಂಗವಾಗಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಪರಂಪರೆಯಿದ್ದು, ಈ ಬಾರಿ ಪ್ರಶಸ್ತಿಯನ್ನು ನವೆಂಬರ್ 14 ರಂದು ನಡೆಯುವ ಮಕ್ಕಳ ದಿನಾಚರಣೆಯಲ್ಲಿ ನೀಡಲಾಗಲಿದೆ. ಪ್ರಶಸ್ತಿಯಾಗಿ ಆಯ್ಕೆಯಾದ ವ್ಯಕ್ತಿಗೆ ರೂ.25,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಸಂಸ್ಥೆಗೆ ರೂ.1 ಲಕ್ಷ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಪ್ರದಾನ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ನಿಗದಿತ ನಮೂನೆಗಳನ್ನು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪಿಎಸ್-1, ಹೈಟೆಂನ್ಷನ್ ಲೈನ್ ರಸ್ತೆ, ಕೃಷ್ಣದೇವರಾಯ ಸರ್ಕಲ್ ಹತ್ತಿರ, ವಿಜಯನಗರ 2ನೇ ಹಂತ, ಮೈಸೂರು–17ರಿಂದ ಪಡೆದುಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿದ ಅರ್ಜಿಯನ್ನು, ವಿವರಗಳ ಸಿ.ಡಿ. (ಸಾಫ್ಟ್ ಕಾಪಿ) ಹಾಗೂ ಉತ್ತಮ ಗುಣಮಟ್ಟದ ಸ್ಪೈರಲ್ ಬೈಂಡಿಂಗ್ನಲ್ಲಿ ಸಿದ್ಧಪಡಿಸಿದ ಬುಕ್ಲೆಟ್ನೊಂದಿಗೆ ಕಚೇರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 5, 2025 ಆಗಿದೆ. ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವುದಾಗಿ ಸಂಬಂಧಿಸಿದ ಪೊಲೀಸ್ ಠಾಣೆಯಿಂದ ದೃಢೀಕರಣ ಪತ್ರವನ್ನು ಸೇರಿಸುವುದು ಕಡ್ಡಾಯವಾಗಿದೆ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ವ್ಯಕ್ತಿ ಅಥವಾ ಸಂಸ್ಥೆ ಸಲ್ಲಿಸಿರುವ ಸೇವೆಯ ಗುಣಮಟ್ಟವನ್ನು ಈ ಪ್ರಶಸ್ತಿಯ ಆಯ್ಕೆಗಾಗಿ ಏಕೈಕ ಮಾನದಂಡವಾಗಿ ಪರಿಗಣಿಸಲಾಗುತ್ತದೆ ಎಂದು ಇಲಾಖೆಯ ಪ್ರಕಟಣೆ ಸ್ಪಷ್ಟಪಡಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೈಸೂರು ಉಪ ನಿರ್ದೇಶಕರ ಕಚೇರಿಯ ದೂರವಾಣಿ ಸಂಖ್ಯೆ 0821–2495432ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

