ಅಂಬೇಡ್ಕರ್ ಜಯಂತಿ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾರು ಹರಿದ ಪರಿಣಾಮ 7 ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆಯು ಚಿಕ್ಕಮಗಳೂರು ಜಿಲ್ಲೆ ಬಿಳೆಕಲ್ಲು ಗ್ರಾಮದಲ್ಲಿ ಸಂಭವಿಸಿದೆ.
ಈ ದುರ್ಘಟನೆಯಲ್ಲಿ 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೃತ ಬಾಲಕಿಯನ್ನು ಸಾನ್ವಿ(7) ಎಂದು ಗುರುತಿಸಲಾಗಿದೆ.

ಈಕೆ ಬಿಳೆಕಲ್ಲು ಗ್ರಾಮದಲ್ಲಿರುವ ತನ್ನ ತಂಗಿ ಮನೆಗೆ ಹೋಗಿದ್ದಳು ಎನ್ನಲಾಗಿದೆ. ಇನ್ನು ಈ ದುರ್ಘಟನೆಯಲ್ಲಿ ಗಾಯಗೊಂಡವರನ್ನು ನಿಶ್ಚಿತಾ (11), ವರ್ಷದ ತೃಪ್ತಿ (11), ತಿಮ್ಮರಾಜು (45), ಉಷಾ (22), ಸೃಷ್ಟಿ (18), ನಾಗರಾಜು(28), ಚೇತನ್ (16)ಎಂದು ಗುರುತಿಸಲಾಗಿದೆ.
ಗಾಯಗೊಂಡ 9 ಮಂದಿಯಲ್ಲಿ 8 ಜನರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಕಾರು ಚಲಾಯಿಸುತ್ತಿದ್ದ ಸುಧಾಕರ್ ಎಂಬವರಿಗೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಗಾಯಗೊಂಡಿದ್ದ ಸುಧಾಕರ್ರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಆಂಬುಲೆನ್ಸ್ ಅಡ್ಡಗಟ್ಟಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಘಟನೆ ಕೂಡ ನಡೀತು.
ಈ ಪ್ರಕರಣ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

