ಬೆಳ್ತಂಗಡಿ: ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ಸುಮಾರು ಏಳು ಲಕ್ಷದ ಅರವತ್ತು ಸಾವಿರ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾದ ಘಟನೆ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ನಡೆದಿದೆ. ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತ್ವಲಾಹ್ ಯಾನೆ ಅನ್ವರ್ ಯಾನೆ ಅನ್ಸರ್ (21) ಎಂದು ಗುರುತಿಸಲಾಗಿದೆ.
ಪಿಲಿಚಂಡಿಕಲ್ಲುವಿನಲ್ಲಿ ರಿಕ್ಷಾವೊಂದರ ಸಮೀಪ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ನಿಂತಿರುವುದು ಗಸ್ತು ನಿರತ ಪೊಲೀಸರ ಗಮನಕ್ಕೆ ಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕುವೆಟ್ಟು ನಿವಾಸಿ ತ್ವಲಾಹ್ ಎಂದು ತಿಳಿದು ಬಂದಿದೆ. ಆತನನ್ನು ಹೆಚ್ಚಿನ ತನಿಖೆ ನಡೆಸಿದಾಗ ಆತನಲ್ಲಿ ಗಾಂಜಾ ಪತ್ತೆಯಾಗಿದೆ. ಸ್ಥಳದಲ್ಲಿದ್ದ ರಿಕ್ಷಾ ಮತ್ತು ಕಾರ್ ಒಂದನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ 7,60,000 ರೂ. ಮೌಲ್ಯದ ನಿಷೇಧಿತ ಮಾದಕ ವಸ್ತು ಎಂಜಿಎಂಎ ಪತ್ತೆಯಾಗಿದೆ.
ಬಂಧಿತ ತ್ವಲಾಹ್ನಿಂದ ಡ್ರಗ್ಸ್ ಖರೀದಿಸಲು ಸ್ಥಳಕ್ಕೆ ಬಂದ ಮತ್ತೊಬ್ಬ ಆರೋಪಿ ಅಮ್ಜತ್ ಖರಾರ್ ತಾನು ಬಂದಿದ್ದ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಬಂದಿತು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ 11 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

