ಮಂಗಳೂರು: ಹನ್ನೊಂದು ವರ್ಷಗಳ ಹಿಂದೆ ನಗರದ ಆಕಾಶಭವನದ ಸಮೀಪ ನಡೆದ ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ತಲೆಮರೆಸಿಕೊಂಡ ಮುಖ್ಯ ಆರೋಪಿಯನ್ನು ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ನಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕರ್ನೇಳ್ಳಿ ಗ್ರಾಮದ ಸಂತೋಷ್ ಎಸ್. (34) ಎಂದು ಗುರುತಿಸಲಾಗಿದೆ.
ಕಾವೂರು ಠಾಣಾ ವ್ಯಾಪ್ತಿಯ ಆಕಾಶಭವನದಲ್ಲಿ 2015 ರಲ್ಲಿ ನಡೆದ ಘಟನೆ ಇದಾಗಿದ್ದು, ಮದರಂಗಿ ಕಾರ್ಯಕ್ರಮವೊಂದರಲ್ಲಿ ಕೊಲೆಯತ್ನ ನಡೆದಿತ್ತು. ಅಶೋಕ್ ಕುಮಾರ್ ಕೊಟ್ಟಾರಿ ಮತ್ತು ಜಗ್ಗು ಎಂಬಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಅಶೋಕ್ ಕುಮಾರ್ ಕೊಟ್ಟಾರಿಯ ಮೇಲೆ ಸಂತೋಷ್, ಧನು, ರಂಜಿತ್, ಧೂಮ, ನರೇಶ್ ಮತ್ತು ಜಗ್ಗು ಸೇರಿ ತಲವಾರ್ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದರು.
ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪ್ರಕರಣ ನಡೆದ ದಿನದಿಂದಲೇ ಮುಖ್ಯ ಆರೋಪಿ ಸಂತೋಷ್ ತಲೆತಪ್ಪಿಸಿಕೊಂಡಿದ್ದ. ನ್ಯಾಯಾಲಯ ಆತನ ಮೇಲೆ ಎಲ್ಪಿಸಿ ವಾರಂಟ್ ಹೊರಡಿಸಿತ್ತು.
ಆತನ ಪತ್ತೆಗೆ ಮಾಹಿತಿ ಕಲೆ ಹಾಕುತ್ತಿದ್ದ ಪೊಲೀಸರಿಗೆ ಆತ ಹಾವೇರಿ ಚಿಕ್ಕೆರೂರಿನಲ್ಲಿರುವ ಸುಳಿವು ಸಿಕ್ಕಿದ್ದು, ಅಲ್ಲಿಗೆ ತೆರಳಿ ಆತನನ್ನು ಬಂಧಿಸಿದ್ದಾರೆ.

