ಕಾಪು: ಹಿಂದಿನ ಕಂದಾಯ ಸಚಿವರು ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಂಭವಿಸುವ ಕಡಲ್ಕೊರೆತಕ್ಕೆ ಉತ್ತಮ ತಂತ್ರಜ್ಞಾನ ಆಯ್ಕೆ ಮಾಡಿ ಶಾಶ್ವತ ತಡೆಗೋಡೆ ನಿರ್ಮಾಣವನ್ನು ಸುಮಾರು 210 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದಿರಿಸಿದ್ದರು. ಕೇಂದ್ರ ಅನುಮೋದನೆ ನೀಡಿದ ತಕ್ಷಣ ಕಾಮಗಾರಿ ಆರಂಭಿಸುವುದಾಗಿ ಸಚಿವ ಯು.ಟಿ. ಖಾದರ್ ಅವರು ತಿಳಿಸಿದ್ದಾರೆ.
ಅವರು ಇಂದು ಕಾಪುವಿನ ಲೈಟ್ ಹೌಸ್ ಸಮೀಪದ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.
ಕಡಲ್ಕೊರೆತದ ಅಪಾಯ ಇರುವ ಪ್ರದೇಶಗಳಲ್ಲಿ ತುರ್ತು ಕೆಲಸಗಳನ್ನು ಮಾಡಲು ಬಂದರು ಮತ್ತು ಮೀನುಗಾರಿಕಾ ಇಲಾಖೆ ಅಂದಾಜುಪಟ್ಟಿ ತಯಾರಿಸಿ, ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ ಬಳಿಕ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಕಳುಹಿಸಿದ ಬಳಿಕ ಕಾಮಗಾರಿ ನಡೆಸಬೇಕಿದೆ. ಇಂದು ಪರಿಶೀಲನೆ ನಡೆಸಿದ ಪ್ರದೇಶಗಳು ಸ್ವಲ್ಪ ಮಟ್ಟಿಗೆ ಅಪಾಯಕಾರಿಯಾಗಿದೆ. 15 ದಿನದಲ್ಲಿ ಅದು ಸರಿಯಾಗಲಿದೆ. ಇದಕ್ಕೆ ಅಂದಾಜು ಪಟ್ಟಿ ಬೆಂಗಳೂರಿಗೆ ಕಳುಹಿಸಿದರೆ ಬರುವ ವರ್ಷ ತಡೆಗೋಡೆ ಕಾಮಗಾರಿ ಅನುಷ್ಠಾನ ಆಗಬಹುದಾಗಿದೆ. ಕಡಲ್ಕೊರೆತ ತಡೆಗೋಡೆ ಕಾಮಗಾರಿ ಇಂದಿಗೆ ಆಗುವುದಿಲ್ಲ. ಈ ವರ್ಷ ಯೋಜನೆ ರೂಪಿಸಿದಲ್ಲಿ ಮುಂದಿನ ಮಳೆಗಾಲ ಪೂರ್ವದಲ್ಲಿ ಕಾಮಗಾರಿ ನಡೆಸಬಹುದು. ಅಪಾಯಕಾರಿ ಪ್ರದೇಶದಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಅವರು ಸೂಚಿಸಿದ್ದಾರೆ.

