ಮಂಗಳೂರು: ರಸ್ತೆ ಬದಿಯ ಗುಂಡಿಯಲ್ಲಿ ನಿಂತಿದ್ದ ಮಳೆಯ ಕಲುಷಿತ ನೀರಿನಲ್ಲಿ ವ್ಯಾಪಾರಿಯೊಬ್ಬರು ಶುಂಠಿ ತೊಳೆದಿದ್ದು, ಅದನ್ನು ಮಾರಾಟಕ್ಕೆ ಇಟ್ಟ ಘಟನೆ ನಡೆದಿದೆ.
ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಇಂತಹ ಕೃತ್ಯಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣಕ್ಕೆ ವ್ಯಾಪಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಾಪಾರಿ ಕಲುಷಿತ ಕೊಳಕು ನೀರಿನಲ್ಲಿ ಶುಂಠಿ ತೊಳೆಯುತ್ತಿರುವ ದೃಶ್ಯವನ್ನು ಕಂಡ ಪಾದಚಾರಿಗಳು, ವಾಹನ ಸವಾರರು ಕಳವಳಗೊಂಡಿದ್ದು, ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಹೀಗೆ ಶುಚಿತ್ವವಿಲ್ಲದೆ ಆಹಾರ ವಸ್ತುಗಳನ್ನು ತೊಳೆದರೆ ಅದಕ್ಕೆ ಮಣ್ಣು, ಬ್ಯಾಕ್ಟೀರಿಯಾ, ವೈರಸ್ ಮೊದಲಾದವುಗಳು ಸೇರಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುವ ಸಾಧ್ಯತೆ ಇದೆ. ಇಂತಹ ಕೃತ್ಯಗಳಿಗೆ ಕಡಿವಾಣ ಬೀಳುವ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

