ದೆಹಲಿ: ಆನ್ಲೈನ್ ಶಾಪಿಂಗ್ನಲ್ಲಿ ಗ್ರಾಹಕರಿಗೆ ಹೆಚ್ಚಿನ ಪಾರದರ್ಶಕತೆ ಮತ್ತು ರಕ್ಷಣೆ ನೀಡಲು ಕೇಂದ್ರ ಸರ್ಕಾರ ಇ-ಕಾಮರ್ಸ್ ನಿಯಮಗಳಿಗೆ ಮಹತ್ವದ ತಿದ್ದುಪಡಿ ತರಲು ಮುಂದಾಗಿದೆ.
2027ರ ಜನವರಿ 1ರಿಂದ ಪ್ರಮುಖ ಇ-ಕಾಮರ್ಸ್ ವೇದಿಕೆಗಳಲ್ಲಿ 9 ಹೊಸ ನಿಯಮಗಳು ಜಾರಿಗೆ ಬರಲಿವೆ. ಉತ್ಪನ್ನದ ಕಳೆದ 30 ದಿನಗಳ ಕನಿಷ್ಠ ಬೆಲೆ ಪ್ರದರ್ಶನ, ಸರ್ಚ್ ರಿಸಲ್ಟ್ನಲ್ಲಿ ಪಾರದರ್ಶಕತೆ ಹಾಗೂ ಪಾವತಿಸಿದ ಜಾಹೀರಾತುಗಳಿಗೆ ‘Sponsored’ ಅಥವಾ ‘Ad’ ಲೇಬಲ್ ಕಡ್ಡಾಯವಾಗಲಿದೆ.
ಇದರ ಜೊತೆಗೆ ಡಾರ್ಕ್ ಪ್ಯಾಟರ್ನ್ಗಳ ವಾರ್ಷಿಕ ಆಡಿಟ್, ಗ್ರಾಹಕರ ದೂರುಗಳ ಲಿಖಿತ ದಾಖಲೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಪರ್ಕ ಹಾಗೂ ಉತ್ಪನ್ನದ ರಿಟರ್ನ್, ರೀಫಂಡ್, ವಾರಂಟಿ ಮತ್ತು ಆಮದುದಾರರ ವಿವರಗಳನ್ನು ಖರೀದಿಗೂ ಮುನ್ನವೇ ನೀಡುವುದು ಕಡ್ಡಾಯವಾಗಲಿದೆ. ವೈಯಕ್ತಿಕ ಡೇಟಾವನ್ನು ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸುವುದಕ್ಕೂ ನಿರ್ಬಂಧ ವಿಧಿಸಲಾಗುತ್ತಿದೆ.

