ನವದೆಹಲಿ: ಮಕ್ಕಳಿಗೆ ನೆಗಡಿ, ಕೆಮ್ಮು ಅಥವಾ ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರ ಸಲಹೆ ಪಡೆಯದೆ ನೇರವಾಗಿ ಕೆಮ್ಮಿನ ಸಿರಪ್ ನೀಡುವ ಪೋಷಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ವಿಶೇಷವಾಗಿ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಲವು ಕೆಮ್ಮಿನ ಸಿರಪ್ಗಳನ್ನು ನೀಡುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಔಷಧ ನಿಯಂತ್ರಣ ಪ್ರಾಧಿಕಾರ ಎಚ್ಚರಿಸಿದೆ.
ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಔಷಧ ನಿಯಮಗಳು, 1945ಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಪ್ರಸ್ತಾವಿತ ನಿಯಮದಂತೆ, ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬಳಸಬಾರದು ಎಂಬ ಎಚ್ಚರಿಕೆಯನ್ನು ಕೆಮ್ಮಿನ ಸಿರಪ್ಗಳ ಲೇಬಲ್ ಮೇಲೆ ಸ್ಪಷ್ಟವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸುವ ಉದ್ದೇಶ ಹೊಂದಲಾಗಿದೆ.
ಈ ಎಚ್ಚರಿಕೆಯನ್ನು ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವಂತೆ ಲೇಬಲ್ನಲ್ಲಿ ಪ್ರಮುಖವಾಗಿ ಪ್ರದರ್ಶಿಸುವ ಬಗ್ಗೆಯೂ ಪ್ರಸ್ತಾವಿಸಲಾಗಿದೆ. ಓದಲು ಬಾರದವರಿಗೂ ಎಚ್ಚರಿಕೆ ಸ್ಪಷ್ಟವಾಗಿ ತಿಳಿಯುವಂತೆ ಸೂಕ್ತ ಚಿತ್ರ ಅಥವಾ ಚಿಹ್ನೆಗಳನ್ನು ಬಳಸುವ ಸಾಧ್ಯತೆಯೂ ಇದೆ.
ವೈದ್ಯಕೀಯ ತಜ್ಞರ ಪ್ರಕಾರ, ಚಿಕ್ಕ ಮಕ್ಕಳ ಉಸಿರಾಟದ ವ್ಯವಸ್ಥೆ ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗದಿರುವುದರಿಂದ ಕೆಲವು ಔಷಧಿಗಳ ಪರಿಣಾಮ ಅವರಿಗೆ ಹೆಚ್ಚು ತೀವ್ರವಾಗಿರಬಹುದು. ತಪ್ಪಾದ ಪ್ರಮಾಣದಲ್ಲಿ ಅಥವಾ ವೈದ್ಯರ ಸಲಹೆಯಿಲ್ಲದೆ ಔಷಧಿ ನೀಡುವುದರಿಂದ ಅತಿಯಾದ ಮಂಪರು, ಉಸಿರಾಟದ ತೊಂದರೆ ಸೇರಿದಂತೆ ಗಂಭೀರ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ.
ಹೀಗಾಗಿ, ಮಕ್ಕಳಿಗೆ ಕೆಮ್ಮು, ನೆಗಡಿ ಅಥವಾ ಜ್ವರ ಕಾಣಿಸಿಕೊಂಡಾಗ ಪೋಷಕರು ಸ್ವಯಂ ಔಷಧೋಪಚಾರ ಮಾಡುವ ಬದಲು ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ. ಯಾವುದೇ ಔಷಧಿ ನೀಡುವ ಮೊದಲು ಅದರ ಲೇಬಲ್, ವಯೋಮಿತಿ ಮತ್ತು ಬಳಕೆಯ ಸೂಚನೆಗಳನ್ನು ಪರಿಶೀಲಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

