ಕುಂದಾಪುರ: ಕಳೆದ 18 ವರ್ಷಗಳಿಂದ ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕಟ್ಬೆಲ್ತೂರು ನಿವಾಸಿ ರಾಘವೇಂದ್ರ ಜೋಗಿ (48) ಅವರು ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಟ್ಬೆಲ್ತೂರಿನಲ್ಲಿ ಹೆಂಡತಿ ಹಾಗೂ ಮಗಳೊಂದಿಗೆ ವಾಸಿಸುತ್ತಿದ್ದ ರಾಘವೇಂದ್ರ ಜೋಗಿಯವರು ದಿನಾಂಕ 24/09/2026 ರಂದು ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಮಧ್ಯಾಹ್ನ 12:30 ರ ಸುಮಾರಿಗೆ ಘಟನೆ ಗಮನಕ್ಕೆ ಬಂದ ತಕ್ಷಣ, ಕುಟುಂಬಸ್ಥರು ಹಾಗೂ ಸ್ಥಳೀಯರು ಅವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ “ತನ್ನ ಸಾವಿಗೆ ತಾನೇ ಕಾರಣ” ಎಂದು ಬರೆದಿಟ್ಟಿರುವುದು ತಿಳಿದುಬಂದಿದೆ. ವೈಯಕ್ತಿಕ ಕಾರಣಗಳಿಂದ ಅಥವಾ ಯಾವುದೋ ಮನಃಖೇದದಿಂದ ನೊಂದು ಅವರು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ. ಈ ಕುರಿತು ಮೃತರ ಸಹೋದರ ನೀಡಿದ ದೂರಿನನ್ವಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 31/2026, ಕಲಂ 194 ಬಿಎನ್ಎಸ್ಎಸ್ (BNSS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

