ಬೆಂಗಳೂರು: ಬೇಸಿಗೆ ಹಾಗೂ ಚಳಿಗಾಲವೆನ್ನದೆ ವರ್ಷವಿಡೀ ನೆಚ್ಚಿನ ತಂಪಿನ ಸವಿಯಾದ ಐಸ್ಕ್ರೀಂ ಪ್ರಿಯರಿಗೆ ಆತಂಕ ತರುವಂತಹ ಸಂಗತಿಯೊಂದು ಬೆಳಕಿಗೆ ಬಂದಿದೆ. ರಾಜ್ಯದ ವಿವಿಧೆಡೆ ಕಾರ್ಯಾಚರಿಸುತ್ತಿರುವ ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಹಲವು ಕಡೆಗಳಲ್ಲಿ ಅವಧಿ ಮೀರಿದ ಹಾಗೂ ಅಸಮರ್ಪಕ ಲೇಬಲಿಂಗ್ ಹೊಂದಿರುವ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ.
ಆರೋಗ್ಯ ಸಚಿವರ ನೇರ ಸೂಚನೆಯ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ಅಧಿಕಾರಿಗಳು, ರಾಜ್ಯಾದ್ಯಂತ ಸುಮಾರು 45ಕ್ಕೂ ಹೆಚ್ಚು ಐಸ್ಕ್ರೀಂ ಉತ್ಪಾದನಾ ಘಟಕಗಳಲ್ಲಿ ಸಮಗ್ರ ತಪಾಸಣೆ ಕೈಗೊಂಡಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಅವಧಿ ಮೀರಿದ ಕಚ್ಚಾವಸ್ತುಗಳು ಪತ್ತೆಯಾಗಿದ್ದು, ಹಲವು ಘಟಕಗಳಲ್ಲಿ ನೈರ್ಮಲ್ಯದ ಕೊರತೆ, ಲೇಬಲಿಂಗ್ ಲೋಪ ಹಾಗೂ ಕಡ್ಡಾಯ ಪರವಾನಗಿ ಇಲ್ಲದೆ ಅಕ್ರಮವಾಗಿ ಉತ್ಪಾದನೆ ನಡೆಸುತ್ತಿರುವುದು ಕಂಡುಬಂದಿದೆ. ನಿಯಮ ಮೀರಿದ ಘಟಕಗಳ ವಿರುದ್ಧ ಇಲಾಖೆ ಈಗಾಗಲೇ ಕಾನೂನು ಕ್ರಮಕ್ಕೆ ಮುಂದಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಪರಿಶೀಲನಾ ಕಾರ್ಯಾಚರಣೆ ತೀವ್ರಗೊಂಡಿದ್ದು, ಆಹಾರ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಗ್ರಾಹಕರ ಆರೋಗ್ಯದ ಜೊತೆ ಆಟವಾಡುತ್ತಿರುವ ಘಟಕಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ರೀತಿಯ ದಾಳಿಗಳು ಮುಂಬರುವ ದಿನಗಳಲ್ಲೂ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಇನ್ನು, ಗ್ರಾಹಕರು ಐಸ್ಕ್ರೀಂ ಹಾಗೂ ಇತರ ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನು ಖರೀದಿಸುವಾಗ ಹೆಚ್ಚಿನ ಜಾಗರೂಕತೆ ವಹಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬ ಗ್ರಾಹಕರೂ ಪ್ಯಾಕೇಟ್ ಮೇಲಿರುವ ತಯಾರಿಕಾ ದಿನಾಂಕ (MFG Date), ಬಳಕೆ ಅವಧಿ ಮುಕ್ತಾಯದ ದಿನಾಂಕ (Expiry Date), ಪ್ಯಾಕ್ ಸೀಲ್ ಮತ್ತು ಸೂಕ್ತ ಲೇಬಲ್ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಖರೀದಿಸಬೇಕೆಂದು ಆಹಾರ ಸುರಕ್ಷತಾ ಇಲಾಖೆ ಸಲಹೆ ನೀಡಿದೆ.

