ಬೆಂಗಳೂರು: ಇಂದಿನ ಆಧುನಿಕ ಹಾಗೂ ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಯುವಜನತೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರೂ, ನಿಜಜೀವನದಲ್ಲಿ ಅತ್ಯಂತ ಆಪ್ತ ಹಾಗೂ ಅರ್ಥಪೂರ್ಣ ಸಂಬಂಧಗಳ ತೀವ್ರ ಅಭಾವವನ್ನು ಎದುರಿಸುತ್ತಿದ್ದಾರೆ. ದೇಶದ ಪ್ರಮುಖ ಮೆಟ್ರೋ ಹಾಗೂ ಮೊದಲ ಹಂತದ ನಗರಗಳಲ್ಲಿ ವಾಸಿಸುತ್ತಿರುವ 18 ರಿಂದ 45 ವರ್ಷ ವಯಸ್ಸಿನ 1,000 ಸಿಂಗಲ್ಸ್ಗಳನ್ನು ಆಧರಿಸಿ, ಡೇಟಿಂಗ್ ಆ್ಯಪ್ ಸಂಸ್ಥೆ ‘ಮ್ಯಾಚ್ ಗ್ರೂಪ್’ ಹಾಗೂ ‘ಇಪ್ಸೋಸ್’ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಸತ್ಯ ಹೊರಬಿದ್ದಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 35ರಷ್ಟು ಯುವಜನರು ತಾವು ಸದಾ ‘ಒಂಟಿತನ’ದಿಂದ ಬಳಲುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ಕೆಲಸದ ಒತ್ತಡ ಮತ್ತು ಮಾನಸಿಕ ದಣಿವೇ ಮುಖ್ಯ ಕಾರಣ
ಭಾರತೀಯ ಯುವಜನತೆಗೆ ಜನರೊಂದಿಗೆ ಬೆರೆಯಲು ಅವಕಾಶಗಳ ಕೊರತೆಯೇನೂ ಇಲ್ಲ. ಶೇ. 75ರಷ್ಟು ಯುವಕ-ಯುವತಿಯರು ವಾರಕ್ಕೊಮ್ಮೆಯಾದರೂ ಹೊರಗೆ ಹೋಗಿ ಸ್ನೇಹಿತರು ಮತ್ತು ಆಪ್ತರನ್ನು ಭೇಟಿಯಾಗುತ್ತಾರೆ. ಆದಾಗ್ಯೂ, ವೃತ್ತಿಜೀವನದ ಅತಿಯಾದ ಒತ್ತಡ ಹಾಗೂ ಮಾನಸಿಕ ದಣಿವು ಅವರನ್ನು ಹೈರಾಣಾಗಿಸಿದೆ. ಶೇಕಡಾ 64ರಷ್ಟು ಮಂದಿ ತಮ್ಮ ಸಾಮಾಜಿಕ ಜೀವನಕ್ಕಿಂತ ಓದು ಮತ್ತು ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ‘ಕೆಲಸವೇ ಮೊದಲು’ ಎಂಬ ಧೋರಣೆ ಅವರನ್ನು ಒಂಟಿತನದತ್ತ ತಳ್ಳುತ್ತಿದೆ. ದಿನದ ಕೆಲಸ ಮುಗಿದ ನಂತರ ಯಾರನ್ನಾದರೂ ಭೇಟಿಯಾಗಲು ಅಥವಾ ಮಾತನಾಡಲು ಸಾಧ್ಯವಾಗದಷ್ಟು ಸುಸ್ತಾಗಿರುವುದಾಗಿ ಶೇ. 55ರಷ್ಟು ಮಂದಿ ತಿಳಿಸಿದ್ದಾರೆ. ಇನ್ನು ಶೇ. 58ರಷ್ಟು ಯುವಜನರು ಆನ್ಲೈನ್ನಲ್ಲಿ ಪ್ರತಿಯೊಬ್ಬರೊಂದಿಗೂ ಸಂಪರ್ಕದಲ್ಲಿದ್ದರೂ, ನಿಜ ಜೀವನದಲ್ಲಿ ತೀವ್ರ ಭಾವನಾತ್ಮಕ ಶೂನ್ಯತೆ ಅನುಭವಿಸುತ್ತಿದ್ದಾರೆ.
ಗಾಢ ಸಂಬಂಧ ಹಾಗೂ ‘ನಿಜ ಪ್ರೀತಿ’ ಮೇಲಿದೆ ಅಪಾರ ನಂಬಿಕೆ
ಒಂಟಿತನ ಕಾಡುತ್ತಿದ್ದರೂ ಯುವಜನತೆ ಪ್ರೀತಿ ಮತ್ತು ಭವಿಷ್ಯದ ಬಾಂಧವ್ಯದ ಮೇಲಿನ ನಂಬಿಕೆಯನ್ನೇನೂ ಕಳೆದುಕೊಂಡಿಲ್ಲ. ಬದಲಿಗೆ ತಮಗೆ ಎಂತಹ ವ್ಯಕ್ತಿಯ ಸಾಂಗತ್ಯ ಬೇಕು ಎಂಬುದರ ಕುರಿತು ಸ್ಪಷ್ಟತೆ ಹೊಂದಿದ್ದಾರೆ. ಶೇ. 70ರಷ್ಟು ಯುವಜನರು ಹೊಸ ಸಂಬಂಧಗಳನ್ನು ಬೆಳೆಸಲು ಸಕ್ರಿಯವಾಗಿ ಶ್ರಮಿಸುತ್ತಿದ್ದರೆ, ಶೇ. 72ರಷ್ಟು ಮಂದಿಗೆ ನೂರಾರು ಸಾಮಾನ್ಯ ಸ್ನೇಹಿತರಿಗಿಂತ ಬೆರಳೆಣಿಕೆಯಷ್ಟು ಆಪ್ತ ಮತ್ತು ನಿಕಟ ಸಂಬಂಧಗಳು ಸಾಕು ಎಂಬ ಅಭಿಪ್ರಾಯವಿದೆ.
ಶೇ. 78ರಷ್ಟು ಜನರು ‘ನಿಜವಾದ ಪ್ರೀತಿ’ಯ ಅಸ್ತಿತ್ವವನ್ನು ನಂಬಿದ್ದು, ಶೇ. 77ರಷ್ಟು ಮಂದಿ ತಮಗಾಗಿ ಹುಟ್ಟಿದ ವಿಶೇಷ ವ್ಯಕ್ತಿ ಖಂಡಿತಾ ಸಿಗುತ್ತಾರೆ ಎಂಬ ಆಶಾವಾದದಲ್ಲಿದ್ದಾರೆ. ಇದಲ್ಲದೆ, ಶೇ. 85ರಷ್ಟು ಯುವಜನರು (ಜೆನ್-ಝೀ ಯುವಕರಲ್ಲಿ ಶೇ. 89) ದೀರ್ಘಕಾಲಿಕ ಸಂಬಂಧಗಳನ್ನು ಬಯಸುತ್ತಿದ್ದಾರೆ. ತಮಗೆ ಹೊಂದಾಣಿಕೆಯಾಗದ ವ್ಯಕ್ತಿಯೊಂದಿಗೆ ರಾಜಿ ಮಾಡಿಕೊಳ್ಳುವ ಬದಲು, ಸೂಕ್ತ ವ್ಯಕ್ತಿ ಸಿಗುವವರೆಗೆ ಕಾಯಲು ಶೇ. 63ರಷ್ಟು ಮಂದಿ ಸಿದ್ಧರಿದ್ದಾರೆ.
ಡೇಟಿಂಗ್ ಆ್ಯಪ್ಗಳ ಬಳಕೆ ಹಾಗೂ ಭದ್ರತೆಗೆ ಮೊದಲ ಆದ್ಯತೆ
ಕೆಲಸದ ಜಂಜಾಟದ ನಡುವೆಯೂ ಹೊಸ పరిಚಯಗಳನ್ನು ಮಾಡಿಕೊಳ್ಳಲು ಶೇ. 40ರಷ್ಟು ಸಿಂಗಲ್ಸ್ಗಳು ಪ್ರಸ್ತುತ ಡೇಟಿಂಗ್ ಆ್ಯಪ್ಗಳ ಮೊರೆ ಹೋಗಿದ್ದಾರೆ. ಈ ಪೈಕಿ ಶೇ. 63ರಷ್ಟು ಮಂದಿ ಡೇಟಿಂಗ್ ಆ್ಯಪ್ಗಳಿಂದ ತಮ್ಮ ಒಂಟಿತನ ಕಡಿಮೆಯಾಗಿದೆ ಎಂದು ಹಂಚಿಕೊಂಡಿದ್ದರೆ, ಶೇ. 55ರಷ್ಟು ಮಂದಿ ಮುಂದಿನ 12 ತಿಂಗಳಲ್ಲಿ ಇವುಗಳನ್ನು ಬಳಸುವುದಾಗಿ ತಿಳಿಸಿದ್ದಾರೆ.
ಆದಾಗ್ಯೂ, ಆನ್ಲೈನ್ ಡೇಟಿಂಗ್ನಲ್ಲಿ ಸುರಕ್ಷತೆಯ ಕುರಿತು ಶೇ. 60ರಷ್ಟು ಜನರಿಗೆ ಕಳವಳವಿದ್ದು, ಶೇ. 52ರಷ್ಟು ಯುವಕರು ‘ವೆರಿಫೈಡ್ ಪ್ರೊಫೈಲ್’ ಮತ್ತು ಕಟ್ಟುನಿಟ್ಟಿನ ಭದ್ರತಾ ನಿಯಮಗಳಿರುವ ಆ್ಯಪ್ಗಳಿಗೇ ಮೊದಲ ಆದ್ಯತೆ ನೀಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಮ್ಯಾಚ್ ಗ್ರೂಪ್ನ ಇಂಡಿಯಾ ಮತ್ತು ಮಧ್ಯಪ್ರಾಚ್ಯದ ಪ್ರಾದೇಶಿಕ ಮುಖ್ಯಸ್ಥ ಅನುಕೂಲ್ ಕುಮಾರ್, “ಇಂದಿನ ಯಾಂತ್ರಿಕ ಜೀವನಶೈಲಿಯಲ್ಲಿ ಅರ್ಥಪೂರ್ಣ ಸಂಬಂಧಗಳನ್ನು ಹುಡುಕುವುದು ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಜನರ ಆಸಕ್ತಿ ಹಾಗೂ ಮನಸ್ಥಿತಿಗೆ ತಕ್ಕಂತೆ ನೈಜ ಸಂಬಂಧಗಳನ್ನು ಕಲ್ಪಿಸಲು ತಂತ್ರಜ್ಞಾನ ಪ್ರಮುಖ ಸೇತುವೆಯಾಗಿ ಕೆಲಸ ಮಾಡುತ್ತಿದೆ” ಎಂದು ವಿಶ್ಲೇಷಿಸಿದ್ದಾರೆ.

