ಕಾಪು: ಟ್ಯೂಷನ್ ಮುಗಿಸಿ ರಸ್ತೆ ದಾಟುತ್ತಿದ್ದ ಹನ್ನೆರಡು ವರ್ಷದ ಬಾಲಕಿಯೊಬ್ಬಳಿಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಕಾಪು ತಾಲೂಕಿನ ಮೂಳೂರು ಗ್ರಾಮದಲ್ಲಿ ಸಂಭವಿಸಿದೆ.
ಮೂಳೂರು ಫಿಶರೀಸ್ ರಸ್ತೆಯ ನಿವಾಸಿ ಮಳಿಯಪ್ಪ ಅವರ ಪುತ್ರಿ ತನುಶ್ರೀ (12) ಮೃತಪಟ್ಟ ಬಾಲಕಿ.
ಅಕ್ಟೋಬರ್ 11ರ ಮಧ್ಯಾಹ್ನ ತನುಶ್ರೀ ಟ್ಯೂಷನ್ ಮುಗಿಸಿ ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು-ಉಡುಪಿ ರಸ್ತೆ ದಾಟುತ್ತಿದ್ದರು. ಆ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಅತಿವೇಗದಿಂದ ಬಂದ ಕಾರು ಬಾಲಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಬಾಲಕಿಯನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಮೊದಲು ಉಡುಪಿಯ ಟಿ.ಎಂ.ಪೈ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಈ ಅಪಘಾತಕ್ಕೆ ಕಾರು ಚಾಲಕನ ದುಡುಕುತನ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣವೆಂದು ಆರೋಪಿಸಲಾಗಿದೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2026 ಕಲಂ 281, 106(1) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

