ಮಂಗಳೂರು: ದಸರಾ ರಜೆ ಅವಧಿಯಲ್ಲೇ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವುದನ್ನು ವಿರೋಧಿಸಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆಯ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಸೋಮವಾರದಿಂದ ಅಕ್ಟೋಬರ್ 28ರವರೆಗೆ ಪರೀಕ್ಷೆಗಳನ್ನು ನಿಗದಿಪಡಿಸಿದ್ದು, ಇದು ಉದ್ದೇಶಪೂರ್ವಕ ಕ್ರಮ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾದರು. ಈ ವೇಳೆ ವಿದ್ಯಾರ್ಥಿನಿಯರು ಪೊಲೀಸ್ ವಾಹನಕ್ಕೆ ಅಡ್ಡಲಾಗಿ ನಿಂತು ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸರು ಮೈಕ್ ಮೂಲಕ ಮನವಿ ಮಾಡಿದರೂ, ವಿದ್ಯಾರ್ಥಿಗಳು ಪಟ್ಟು ಸಡಿಲಿಸಲಿಲ್ಲ.
ಕ್ರಿಸ್ಮಸ್ ಹಬ್ಬಕ್ಕೆ ರಜೆ ನೀಡುವ ಕಾಲೇಜು ಆಡಳಿತ ಮಂಡಳಿಯು ದಸರಾ ಹಬ್ಬದ ಆಚರಣೆಗೆ ಅವಕಾಶ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದರೂ ಇಲ್ಲಿ ಮಾತ್ರ ಅವಕಾಶ ನೀಡುತ್ತಿಲ್ಲ ಎಂದಿರುವ ವಿದ್ಯಾರ್ಥಿಗಳು, ಒಂದು ವರ್ಷ ಶಿಕ್ಷಣಕ್ಕೆ ತೊಂದರೆಯಾದರೂ ಸರಿ, ಈ ಅವಧಿಯಲ್ಲಿ ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆ ಇರುವುದರಿಂದ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡುವ ನಿರೀಕ್ಷೆಯಿದ್ದು, ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಆತಂಕ ಮೂಡಿದೆ.

