ಬೆಂಗಳೂರು: “ಎಲ್ಲಿಯವರೆಗೂ ಇವಿಎಂ ಇರುತ್ತದೆಯೋ ಅಲ್ಲಿಯವರೆಗೆ ಬಿಜೆಪಿ ಚುನಾವಣೆಗಳಲ್ಲಿ ಗೆಲ್ಲುತ್ತಿರುತ್ತದೆʼʼ. ಹ್ಯಾಕ್ ಮಾಡುವುದರಲ್ಲಿ ಬಿಜೆಪಿಗರು ನಿಪುಣರು. ಈ ಕುರಿತು ಕೇಂದ್ರ ಚುನಾವಣ ಆಯೋಗಕ್ಕೆ ತಿಳಿಸಲು ತೀರ್ಮಾನಿಸಿದ್ದೇವೆ’ ಎಂದು ಗೃಹ ಸಚಿವರಾದ ಡಾ. ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಮಹಾರಾಷ್ಟ್ರದ ಚುನಾವಣ ಫಲಿತಾಂಶವು ಇವಿಎಂ ವ್ಯವಸ್ಥೆಯ ಮೇಲೆ ಅನುಮಾನ ಮೂಡಿಸುವಂತೆ ಮಾಡಿದೆ. ಹಾಗಾಗಿ ನಾವು ಬ್ಯಾಲೆಟ್ ಪೇಪರ್ ಮರಳಿ ಬರಬೇಕೆಂದು ಮನವಿ ಮಾಡುತ್ತಿದ್ದೇವೆ. ಆದರೆ ಚುನಾವಣ ಆಯೋಗ ನಿರಾಕರಿಸುತ್ತಲೇ ಬಂದಿದೆ ಎಂದು ಅಸಮಾಧಾನವನ್ನು ಹೊರ ಹಾಕಿದರು.
ಬಿಜೆಪಿಗರು ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಜನರನ್ನು ನಂಬಿಸುವ ಉದ್ದೇಶದಿಂದ ಝಾರ್ಖಂಡ್ನಲ್ಲಿ ಇವಿಎಂ ಹ್ಯಾಕ್ ಮಾಡಿಲ್ಲ. ಕೆಲವು ಕಡೆ ಬೇಕೆಂದೇ ಬಿಟ್ಟು ಬಿಡುವ ತಂತ್ರಗಾರಿಕೆ ಅವರದ್ದಾಗಿದೆ. ಗೆದ್ದೇ ಗೆಲ್ಲುತ್ತೇವೆ ಎಂದು ಖಚಿತವಾಗಿರುವ ಕಡೆ ಹಾಗೇ ಬಿಡುತ್ತಾರೆ.
ನಮ್ಮ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಳಿಕ ದೊಡ್ಡ ನಾಯಕತ್ವ ಇರಲಿಲ್ಲ. ಆ ಕಾರಣಕ್ಕಾಗಿ ನಮ್ಮ ರಾಜ್ಯವನ್ನು ಬಿಟ್ಟರು ಎಂದು ಪರಮೇಶ್ವರ್ ಸಮಜಾಯಿಷಿ ನೀಡಿದರು.
ಪಕ್ಷದ ಮುಖಂಡರು ಇವಿಎಂ ಸಮಸ್ಯೆಯ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡುವ ನಿರ್ಧಾರದ ಬಗ್ಗೆ ಚಿಂತಿಸಿದ್ದಾರೆ.

