ಮಣಿಪಾಲ: ಕಾಡಂಚಿನ ಪ್ರದೇಶದಲ್ಲಿ ಹಾಗೂ ಕೆಲವು ತೋಟಗಳಲ್ಲಿ ಗಾಂಜಾ ಬೆಳೆಯುವ ಸಾಧ್ಯತೆ ಇದ್ದು, ಇವುಗಳ ಬಗ್ಗೆ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯ ಸಿಬ್ಬಂದಿ ನಿರಂತರ ವೀಕ್ಷಣೆ ನಡೆಸುತ್ತಿರಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಎನ್ಸಿಒಆರ್ಡಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಕ ವಸ್ತುಗಳ ಬಗ್ಗೆ ಶಾಲಾ- ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಕರಾವಳಿ ಪೊಲೀಸರು ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣಿಕೆ ಬಗ್ಗೆ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ 97ಕ್ಕೂ ಹೆಚ್ಚು ಮಾದಕ ಸೇವನೆಗಳ ಪ್ರಕರಣ ದಾಖಲಾಗಿದ್ದು, ಶೇ. 90ರಷ್ಟು ಪ್ರಕರಣಗಳು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಆಗಿದೆ. ಈ ಬಗ್ಗೆ ಕೇರ್ಟೆಕರ್ಗಳನ್ನು ಹೆಚ್ಚು ನಿಯೋಜಿಸಬೇಕು ಹಾಗೂ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ದೂರು ನೀಡಲು ಸರಕಾರ Stop Tobacco ಆ್ಯಪ್ ಅಭಿವೃದ್ಧಿಪಡಿಸಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದರು.

