ವಿದ್ಯಾರ್ಥಿಗಳಿಲ್ಲದೆ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಿರುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ಕನ್ನಡ ಶಾಲೆಯಲ್ಲಿ 102 ವಿದ್ಯಾರ್ಥಿಗಳಿದ್ದರೂ ಶಾಲೆ ಮುಚ್ಚುವ ಆತಂಕ ಎದುರಾಗಿದೆ.
ನೀಲಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಮೂರು ಕನ್ನಡ ಮಾಧ್ಯಮ ಶಾಲೆಗಳಾದ ಶ್ರೀಮಹಿಷಮರ್ಧಿನಿ ಹಿರಿಯ ಪ್ರಾಥಮಿಕ ಶಾಲೆ ರಥಬೀದಿ ನೀಲಾವರ, ಎಳ್ಳಂಪಳ್ಳಿ ಖಾಸಗಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ವಿಶ್ವಕೀರ್ತಿ ಹಿರಿಯ ಪ್ರಾಥಮಿಕ ಶಾಲೆ ಕುಂಜಾಲು ಇವುಗಳ ಪೈಕಿ ಈಗ ಉಳಿದಿರುವುದು ಒಂದೇ ಶಾಲೆ ಅದು ವಿಶ್ವಕೀರ್ತಿ ಹಿರಿಯ ಪ್ರಾಥಮಿಕ ಶಾಲೆ ಕುಂಜಾಲು ಮಾತ್ರ.
ಸಮರ್ಥ ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಈಗಾಗಲೇ 6 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರಣಕ್ಕಾಗಿ ಇಲ್ಲಿ ಪ್ರಸ್ತುತ ಸುಮಾರು 102 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೂ ಶಾಲೆ ಮುಚ್ಚುವ ಹಂತದಲ್ಲಿದೆ. ಕಾರಣ ಇಲ್ಲಿ ಖಾಯಂ ಶಿಕ್ಷಕರು ಇಲ್ಲದಿರುವುದು !.
ಪೋಷಕರ ಆಂಗ್ಲ ಭಾಷೆಯ ವ್ಯಾಮೋಹ, ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಪೈಪೋಟಿಯ ನಡುವೆಯು ಸಮರ್ಥ ಶಾಲಾಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಈಗಾಗಲೇ 6 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರಣಕ್ಕಾಗಿ ಕನ್ನಡ ಮಾಧ್ಯಮ ಶಾಲೆಯೊಂದು 102 ವಿದ್ಯಾರ್ಥಿಗಳನ್ನು ಹೊಂದಿರುವುದೇ ದೊಡ್ಡ ಸಾಧನೆ. ಆದರೆ ಸರ್ಕಾರದ ಕಣ್ಣಿಲ್ಲದ ನೀತಿಗಳಿಂದಾಗಿ ಶಾಲೆ ಮುಚ್ಚುವ ಹಂತಕ್ಕೆ ಬಂದು ನಿಂತಿದೆ. ಕಾರಣ ಇರುವ ಒಬ್ಬರು ಖಾಯಂ ಶಿಕ್ಷಕರು ಬರುವ ಜೂನ್ ತಿಂಗಳಲ್ಲಿ ನಿವೃತ್ತಿಯಾಗುತ್ತಿರುವುದು.
ಹಾಗಾಗಿ ಇರುವ ಒಂದು ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲೇಬೇಕು ಎಂದು ಪಣ ತೊಟ್ಟಿದ್ದಾರೆ ನೀಲಾವರದ ಗ್ರಾಮಸ್ಥರು.
ಇದಕ್ಕಾಗಿ ನೀಲಾವರ ಪಂಚಾಯತ್ ಸರ್ಕಾರಿ ಜಾಗವೊಂದನ್ನು ಗುರುತುಪಡಿಸಿದ್ದು ಅಲ್ಲೊಂದು ಸರ್ಕಾರಿ ಶಾಲೆ ಕಟ್ಟಿ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲೇ ಉತ್ತಮ ಶಿಕ್ಷಣ ನೀಡಬೇಕೆನ್ನುವುದು ಇವರ ಹೆಬ್ಬಯಕೆಯಾಗಿದೆ. ಅದಕ್ಕಾಗಿ ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ, ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹೇಂದ್ರ ಕುಮಾರ್ ನೀಲಾವರ, ಉಪಾಧ್ಯಕ್ಷರಾದ ರಮೇಶ್ ಪೂಜಾರಿ, ಪಿಡಿಒ ಗೀತಾ ಬಾಳಿಗ , ಪೋಷಕರಾದ ಸುಮ ಶೆಟ್ಟಿ ಮತ್ತಿತರರು ಒಗ್ಗೂಡಿಕೊಂಡು ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಿರುತ್ತಾರೆ. ಹಾಗೆಯೇ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿ ಶಾಲೆಯ ಉಳಿವಿಗಾಗಿ ಮುಂದಿನ ಹೋರಾಟ, ಸಾಧಕ ಬಾಧಕಗಳ ಚರ್ಚೆ ನಡೆಸಿರುತ್ತಾರೆ.
ಕನ್ನಡ ಶಾಲೆಯೊಂದರ ಉಳಿವಿಗಾಗಿ ಗ್ರಾಮಸ್ಥರು ನಡೆಸುತ್ತಿರುವ ದಿಟ್ಟ ಹೋರಾಟಕ್ಕೆ ಜನಪ್ರತಿನಿಧಿಗಳು , ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆ, ಸರ್ಕಾರ ಸ್ಪಂದಿಸಬೇಕಿದೆ.

