ಉಳ್ಳಾಲ : ಮೀನುಗಾರಿಕೆಯನ್ನು ನಡೆಸಿ ಹಳೆಬಂದರು ಮೀನುಗಾರಿಕೆ ದಕ್ಕೆಗೆ ಮರಳುತ್ತಿದ್ದ ಸಂದರ್ಭ ವಿಪರೀತ ಗಾಳಿಯಿಂದಾಗಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಮೊಯಿದ್ದೀನ್ ಚಲಾಯಿಸುತ್ತಿದ್ದ ನಾಡದೋಣಿ ಮಗುಚಿಬಿದ್ದು,ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ದೋಣಿಯಲ್ಲಿದ್ದ ಮೂವರು ಮೀನುಗಾರರು ಜೀವಾಪಾಯದಿಂದ ಪಾರಾಗಿದ್ದಾರೆ.
ದೋಣಿ ಚಲಾಯಿಸುತ್ತಿದ್ದ ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಕಲ್ಲಾಪುವಿನ ನಿವಾಸಿಯಾದ ಮೊಯಿದ್ದೀನ್ ಮತ್ತು ಮೀನುಗಾರರಾದ ಮಹಮ್ಮದ್ ಅಮೀರ್ ಸುಹೈಲ್, ಅಬ್ದುಲ್ ಹಮೀದ್ ಮುಡಿಪೊಡಿ ಸಮುದ್ರಕ್ಕೆ ಬಿದ್ದಿದ್ದಾರೆ. ನಂತರ ದೋಣಿಯನ್ನು ಯಥಾಸ್ಥಿತಿಗೆ ತಂದು ಸುರಕ್ಷಿತವಾಗಿ ದಡ ಸೇರಿದ್ದಾರೆ.
1.25 ಲಕ್ಷ ರೂ. ಮೌಲ್ಯದ ಮೀನಿನ ಬಲೆ ಹಾಗೂ ದೋಣಿಯಲ್ಲಿದ್ದ ಸುಮಾರು 35 ಸಾವಿರ ರೂ. ಮೌಲ್ಯದ ವಿವಿಧ ರೀತಿಯ ಮೀನುಗಳು ಸಮುದ್ರ ಪಾಲಾಗಿದ್ದು ಒಟ್ಟು 1.60 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೀನುಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ತಣ್ಣೀರುಬಾವಿ ಬೆಂಗ್ರೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

