- ತುಳುನಾಡ ರಕ್ಷಣಾ ವೇದಿಕೆ ಉಡುಪಿ ನೂತನ ಅಧ್ಯಕ್ಷರಾಗಿ ಫ್ರ್ಯಾಂಕೀ ಡಿಸೋಜಾ ಮತ್ತು ಗೌರವಾಧ್ಯಕ್ಷರಾಗಿ ಕೃಷ್ಣಕುಮಾರ್ ಆಯ್ಕೆ
- ಕನ್ನಡ ಶಾಲೆಗಳನ್ನು ಉಳಿಸಿ – ಕಸಾಪದಿಂದ ಡಿಸಿಗೆ ಮನವಿ
- ಅಪಘಾತ; ಕಾರ್ ರೇಸ್ ಚಾಂಪಿಯನ್ ರಂಜಿತ್ ಬಲ್ಲಾಳ್ ಸಾ*ವು
- ಬೈಂದೂರು : ಅಗ್ನಿಶಾಮಕ ಠಾಣೆ ಕಟ್ಟಡ ಕಾಮಗಾರಿ ಪೂರ್ಣ – ಈಡೇರಿದ ಸಾರ್ವಜನಿಕರ ಬೇಡಿಕೆ
- ಹಿರಿಯಡಕ ಜಿಲ್ಲಾ ಕಾರಗೃಹಕ್ಕೆ ಪೊಲೀಸರ ದಿಢೀರ್ ದಾಳಿ
- ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಹಿಳೆಯ ಸರ ಕಳವು
- ಅಜಾತಶತ್ರು, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಗಲಿಕೆ ತುಂಬಾ ನೋವಿನ ಸಂಗತಿಯಾಗಿದೆ – ಕೆ.ರಘುಪತಿ ಭಟ್
ತುಳುನಾಡ ರಕ್ಷಣಾ ವೇದಿಕೆ ಉಡುಪಿ ನೂತನ ಅಧ್ಯಕ್ಷರಾಗಿ ಫ್ರ್ಯಾಂಕೀ ಡಿಸೋಜಾ ಮತ್ತು ಗೌರವಾಧ್ಯಕ್ಷರಾಗಿ ಕೃಷ್ಣಕುಮಾರ್ ಆಯ್ಕೆ
ಡಿ.10ರಂದು ಕೇಂದ್ರೀಯ ಕಚೇರಿಯಲ್ಲಿ ನಡೆದ ಕೇಂದ್ರೀಯ ಪ್ರಮುಖರ ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಫ್ರ್ಯಾಂಕೀ ಡಿಸೋಜಾ ಕೊಳಲಗಿರಿ ರವರನ್ನು ಮತ್ತು ಉಡುಪಿ ಜಿಲ್ಲಾ ಗೌರವಾಧ್ಯಕ್ಷರಾಗಿ ಕೃಷ್ಣಕುಮಾರ್ ರವರನ್ನು ನೇಮಕ ಮಾಡಲಾಗಿದೆ ಎಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕನ್ನಡ ಶಾಲೆಗಳನ್ನು ಉಳಿಸಿ – ಕಸಾಪದಿಂದ ಡಿಸಿಗೆ ಮನವಿ
ಮಣಿಪಾಲ : ಕಾಸರಗೋಡಿನಲ್ಲಿ ಕನ್ನಡ ಭಾಷಿಕರ ಮೇಲೆ ಆಗುತ್ತಿರುವ ದಬ್ಟಾಳಿಕೆಯ ಮತ್ತು ಭಾಷಾ ವಿರೋಧಿ ನಿಲುವು ಖಂಡನೀಯ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರ ನೇತೃತ್ವದ ನಿಯೋಗವು ಉಡುಪಿ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಅಪಘಾತ; ಕಾರ್ ರೇಸ್ ಚಾಂಪಿಯನ್ ರಂಜಿತ್ ಬಲ್ಲಾಳ್ ಸಾ*ವು
ಕುಂದಾಪುರ: ಬೈಕ್ಗೆ ಗ್ಯಾಸ್ ಸಿಲಿಂಡರ್ ಸಾಗಾಟದ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಬೈಕ್ ಚಲಾಯಿಸುತ್ತಿದ್ದ ಕಾರು ರೇಸ್ ಚಾಂಪಿಯನ್ ರಂಜಿತ್ ಬಲ್ಲಾಳ್ (59) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಸಂಭವಿಸಿದೆ. ರಂಜಿತ್ ಬಲ್ಲಾಳ್ ಮಂಗಳೂರು ಮೂಲದ ಕೆ.ಬಿ. ಯುವರಾಜ ಬಲ್ಲಾಳ್ ಅವರ ಪುತ್ರ. ಇವರು ಕುಟುಂಬಸ್ಥರೊಂದಿಗೆ 3 ದಿನಗಳ ಹಿಂದೆ ಗೋವಾಗೆ ಪ್ರವಾಸಕ್ಕೆ ತೆರಳಿದ್ದರು. ರಂಜಿತ್ ಅವರು ಬೈಕ್ನಲ್ಲಿ ಬರುತ್ತಿದ್ದರೆ, ಹಿಂದಿನಿಂದ ಮನೆಯವರೆಲ್ಲ ಕಾರಿನಲ್ಲಿ ಬರುತ್ತಿದ್ದರು. ಅರಾಟೆ ಸೇತುವೆಗಿಂತ ತುಸು ಹಿಂದೆ ಒಂದು ಸೇತುವೆಯಲ್ಲಿ ಸಂಚಾರ ನಿಷೇಧಿಸಿದ್ದರಿಂದ ಡೈವರ್ಶನ್ ನೀಡಿದ್ದು, ಅಲ್ಲಿ ಟಾಟಾ ಏಸ್ ಚಾಲಕ ಏಕಾಏಕಿ ನಿಧಾನ ಮಾಡಿದ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಬೈಕ್ ಟಾಟಾ ಏಸ್ ವಾಹನಕ್ಕೆ ಢಿಕ್ಕಿಯಾಯಿತು. ಪರಿಣಾಮ ಬೈಕ್ ಸವಾರ ರಂಜಿತ್ ಬಲ್ಲಾಳ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಬೈಂದೂರು : ಅಗ್ನಿಶಾಮಕ ಠಾಣೆ ಕಟ್ಟಡ ಕಾಮಗಾರಿ ಪೂರ್ಣ – ಈಡೇರಿದ ಸಾರ್ವಜನಿಕರ ಬೇಡಿಕೆ
ಬೈಂದೂರು : ಅಗ್ನಿಶಾಮಕ ಠಾಣೆಯ ಸ್ವಂತ ಕಟ್ಟಡದ ಕಾಮಗಾರಿಯು ಪೂರ್ಣಗೊಂಡಿದೆ, ಮೇಲಧಿಕಾರಿಗಳ ಆದೇಶವಾದ ಕೂಡಲೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿಯಾದ ವಿನಾಯಕ ಕಲ್ಗುಟ್ಕರ್ ತಿಳಿಸಿದ್ದಾರೆ.
ಬೈಂದೂರಿಗೆ ಅಗ್ನಿಶಾಮಕ ಠಾಣೆ ಕಟ್ಟಡ ಬೇಕು ಎಂಬ ಸಾರ್ವಜನಿಕರ ಬೇಡಿಕೆಯು ಈಡೇರಿದೆ. ಸರಕಾರದಿಂದ ಮಂಜೂರಾಗಿರುವ ಮೂರು ಕೋಟಿ ರೂ. ಅನುದಾನದಲ್ಲಿ ಒಂದು ಎಕರೆ ಜಾಗದಲ್ಲಿ ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡಿದೆ. ಬೈಂದೂರಿನಲ್ಲಿ ಅಗ್ನಿ ಶಾಮಕ ಠಾಣೆಯು ಪ್ರಾರಂಭಗೊಂಡು ನಾಲ್ಕು ವರ್ಷವಾಗಿದ್ದರೂ ಸ್ವಂತ ಕಟ್ಟಡ ಇರಲಿಲ್ಲ. ಕರ್ನಾಟಕ ಪೋಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ನೂತನ ಕಟ್ಟಡ ನಿರ್ಮಾಣವಾಗಿದೆ.
ಹಿರಿಯಡಕ ಜಿಲ್ಲಾ ಕಾರಗೃಹಕ್ಕೆ ಪೊಲೀಸರ ದಿಢೀರ್ ದಾಳಿ
ಹಿರಿಯಡಕ ಜಿಲ್ಲಾ ಕಾರಗೃಹಕ್ಕೆ ಎಡಿಶನಲ್ ಎಸ್.ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಪೊಲೀಸರು ಡಿ.9 ರಂದು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜೈಲಿನ ಎಲ್ಲ ವಿಭಾಗಗಳಗೂ ತೆರಳಿ ಗಾಂಜಾ, ಸಿಗರೇಟ್, ತಂಬಾಕು, ಮೊಬೈಲ್ ಬಳಕೆಯ ಬಗ್ಗೆ ಪರಿಶೀಲಿಸಿದರು. ಈ ವೇಳೆ ಪೊಲೀಸರಿಗೆ ಅಕ್ರಮ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ವಸ್ತುಗಳು ಲಭ್ಯವಾಗಿಲ್ಲ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಮಹಿಳೆಯ ಸರ ಕಳವು
ಉಡುಪಿ: ಶ್ರೀಕೃಷ್ಣ ಮಠಕ್ಕೆ ದರ್ಶನಕ್ಕೆ ಬಂದಿದ್ದ ಕೇರಳದ ಮಹಿಳೆಯ ಸರ ಕಳವಾಗಿರುವ ಘಟನೆ ನಡೆದಿದೆ.
ಕೇರಳದ ಸರಸ್ವತಿ(71) ಎಂಬವರು ಕುಟುಂಬದೊಂದಿಗೆ ಉಡುಪಿ ಕೃಷ್ಣ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದಿದ್ದರು. ನಂತರ ಅನಂತೇಶ್ವರ ದೇವಾಸ್ಥಾನದ ಬಳಿ ಹೋಗಿ ನೋಡಿದಾಗ ಅವರು ಧರಿಸಿದ್ದ 32 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜಾತಶತ್ರು, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅಗಲಿಕೆ ತುಂಬಾ ನೋವಿನ ಸಂಗತಿಯಾಗಿದೆ – ಕೆ.ರಘುಪತಿ ಭಟ್
ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಸಲ್ಲಿಸಿರುವ ಸೇವೆ ಸ್ಮರಣೀಯ. ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ. ಕೇಂದ್ರ ಸಚಿವರಾಗಿಯೂ ಅತ್ಯುತ್ತಮ ಸೇವೆ ಸಲ್ಲಿಸಿದ್ದ ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಚಿರಶಾಂತಿ ಕರುಣಿಸಲಿ. ಅವರ ಕುಟುಂಬಕ್ಕೆ, ಬಂಧು ಮಿತ್ರರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.
ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ – ಡಿ.11 ರಂದು ನಡೆಯಬೇಕಿದ್ದ ಮಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ
ಮಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನ ಹಿನ್ನಲೆ ರಾಜ್ಯ ಸರಕಾರ ಡಿಸೆಂಬರ್ 11 ರಂದು ಸರಕಾರಿ ರಜೆ ಘೋಷಿಸಿದ್ದು, ಈ ಹಿನ್ನಲೆ ಬುಧವಾರ ನಡೆಯಬೇಕಿದ್ದ ಎಲ್ಲ ಪದವಿ ಪರೀಕ್ಷೆಗಳನ್ನು ಮಂಗಳೂರು ವಿಶ್ವವಿದ್ಯಾನಿಲಯವು ಮುಂದೂಡಿದೆ. ಮುಂದೂಡಲಾದ ಪರೀಕ್ಷೆ ನಡೆಯುವ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಡವೆ ಭೇಟೆ; ಆರೋಪಿಗಾಗಿ ಶೋಧ
ಕಾರ್ಕಳ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ಹೌತೊಟ್ಟು ಎಂಬಲ್ಲಿ ಕಡವೆ ಜಾತಿಯ ವನ್ಯ ಪ್ರಾಣಿಯನ್ನು ಭೇಟೆಯಾಡಿ, ಮಾಂಸ ತಯಾರಿಸಿ ದಾಸ್ತಾನು ಇರಿಸಿದ ಪ್ರಕರಣವನ್ನು ಪತ್ತೆ ಹಚ್ಚಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸಂದೇಶ್ ಪೂಜಾರಿ(49), ರಾಧಾಕೃಷ್ಣ(47) ಪ್ರಕರಣದ ಆರೋಪಿಗಳಾಗಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಮಂಗಳೂರು ಅರಣ್ಯ ಸಂಚಾರಿದಳಕ್ಕೆ ಬಂದಿದ್ದ ಖಚಿತ ಮಾಹಿತಿಯನ್ವಯ ಕಾರ್ಯಚರಣೆ ನಡೆದಿದೆ. ವೇಣೂರು ಅರಣ್ಯಧಿಕಾರಿ ಸುಬ್ರಹ್ಮಣ್ಯ ಆಚಾರ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದು, ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ವ್ಯಾಪಕ ಮಳೆ; ಹವಾಮಾನ ಇಲಾಖೆ
ಬೆಂಗಳೂರು: ಕಳೆದೊಂದು ವಾರದಿಂದ ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ಇಡೀ ಕರ್ನಾಟಕ ತತ್ತರಿಸಿ ಹೋಗಿತ್ತು. ಈ ಬೆನ್ನಲ್ಲೇ ಕರ್ನಾಟಕದ ಜನರಿಗೆ ಮತ್ತೊಂದು ಕಹಿಸುದ್ದಿ ಇದೆ. ಮುಂದಿನ 2 ವಾರಗಳಲ್ಲಿ ವಾಯುಭಾರ ಕುಸಿತವಾಗಿ ಭಾರೀ ಮಳೆಯಾಗಲಿ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಾತಾಡಿರೋ ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ಅವರು, ಮುಂದಿನ 10 ದಿನದಲ್ಲಿ ಬಂಗಾಳಕೊಲ್ಲಿಯಲ್ಲಿ 2 ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮ ರಾಜ್ಯದಲ್ಲೂ ಭರ್ಜರಿ ಮಳೆಯಾಗಲಿದೆ ಎಂದರು. ತಮಿಳುನಾಡಿನಿಂದ ಕರ್ನಾಟಕಕ್ಕೆ ಎಂಟ್ರಿ ಕೊಟ್ಟ ಫೆಂಗಲ್ ಚಂಡಮಾರುತ ಅರಬ್ಬಿಯತ್ತ ಸಾಗಿದೆ. ಕಳೆದ ಒಂದು ವಾರವಿಡೀ ಕರ್ನಾಟಕದ ಜನ ಮಳೆ, ಗಾಳಿ, ಚಳಿಗೆ ತತ್ತರಿಸಿ ಹೋಗಿದ್ದಾರೆ. ಈ ಫೆಂಗಲ್ ಚಂಡಮಾರುತದದಿಂದ ಸುಧಾರಿಸಿಕೊಳ್ಳುತ್ತಿರೋ ಹೊತ್ತಲ್ಲೇ ಮತ್ತೆರಡು ಸೈಕ್ಲೋನ್ ಸೃಷ್ಟಿಯಾಗುವ ಲಕ್ಷಣ ಕಂಡುಬಂದಿದೆ. ಬಂಗಾಳಕೊಲ್ಲಿಯಲ್ಲಿ ಮೊದಲ ವಾಯುಭಾರ ಕುಸಿತ ಉಂಟಾಗಲಿದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 14 ಮತ್ತು 15 ರಂದು ಮಳೆಯಾಗಲಿದೆ. 2ನೇ ವಾಯುಭಾರ ಕುಸಿತ ಡಿಸೆಂಬರ್ 16ಕ್ಕೆ ಉಂಟಾಗಲಿದ್ದು, ಡಿಸೆಂಬರ್ 17 ಮತ್ತು 18ಕ್ಕೆ ಜೋರು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಹೀಗಾಗಿ ಕರ್ನಾಟಕದ ಜನ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.

