- ಅಂಗನವಾಡಿ ನೌಕರರಿಂದ ಪ್ರತಿಭಟನೆ
- ಗಾಂಜಾ ಸೇವನೆ : ಮೂವರ ಬಂಧನ
- ವಿದೇಶದಿಂದ ದೈವಗಳ ಕಾರ್ಯಕ್ರಮಕ್ಕೆಂದು ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
- ಕಮರಿಗೆ ಬಿದ್ದ ಕ್ರೇನ್ : ಚಾಲಕ ಸಾ*ವು
- ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿ ಸಾಮಾಗ್ರಿಗಳ ಸಮಸ್ಯೆ ಬಗೆಹರಿಸುವಂತೆ ಮನವಿ
- ವೃದ್ಧೆಯ ಸರ ಕಳ್ಳತನಗೈದಿದ್ದ ಆರೋಪಿಯ ಬಂಧನ
- ಸೀತಾ ನದಿಯಲ್ಲಿ ಅಕ್ರಮ ಮರಳುಗಾರಿಕೆ!
- ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಬಹುಭಾಷಾ ನಟಿ ಕೃತಿ ಶೆಟ್ಟಿ
- ಉಡುಪಿ: ಖಾಯಂ ಜಾಹಿರಾತು ಫಲಕಗಳಲ್ಲಿ ಅನುಮತಿ ಸಂಖ್ಯೆ ಕಡ್ಡಾಯ
- ಡಿ.21ರಿಂದ ಜ.19ರವರೆಗೆ ‘ಕರಾವಳಿ ಉತ್ಸವ’ : ಸ್ಪೀಕರ್ ಯು.ಟಿ.ಖಾದರ್
ಅಂಗನವಾಡಿ ನೌಕರರಿಂದ ಪ್ರತಿಭಟನೆ
ಉಡುಪಿ : ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪ್ರತ್ಯೇಕ ನಿದೇಶನಾಲಯವನ್ನು ಜಾರಿ ಮಾಡುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಎದುರು ಅಹೋರಾತ್ರಿ ಪ್ರತಿಭಟನೆಯನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಕನಿಷ್ಠ ವೇತನ ಕಾಯ್ದೆಯಡಿಯಲ್ಲಿ 4 ಗಂಟೆಗಿಂತ ಹೆಚ್ಚು ಕೆಲಸ ಮಾಡಿದವರಿಗೆ ಕನಿಷ್ಠ ವೇತನ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಅಧ್ಯಕ್ಷೆ ಭಾರತಿ, ಖಜಾಂಚಿ ಯಶೋದಾ, ಕವಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ಗಾಂಜಾ ಸೇವನೆ : ಮೂವರ ಬಂಧನ
ಮಂಗಳೂರು : ನಿಷೇಧಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಆರೋಪದಲ್ಲಿ ಕದ್ರಿ ಮತ್ತು ಬಂದರು ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನೀರುಮಾರ್ಗ ಪೆದಮಲೆ ಸರಿಪಳ್ಳದ ಸಂದೇಶ್ ಕುಮಾರ್ (37), ಕೇರಳ ಕೋಝಿಕೋಡ್ ನ ಫಾತೆಲ್ ಅಬೂಬಕರ್ (23) ಮತ್ತು ಯೆಯ್ಯಾಡಿಯ ಜಗದೀಶ್ ಪೈ (29) ಬಂಧಿತ ಆರೋಪಿಗಳು. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ. ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ವಿದೇಶದಿಂದ ದೈವಗಳ ಕಾರ್ಯಕ್ರಮಕ್ಕೆಂದು ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
ವಿದೇಶದಿಂದ ರಜೆಯಲ್ಲಿ ಊರಿಗೆ ಬಂದಿದ್ದ ಯುವಕ ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ಸೋಮವಾರದಂದು ಪುತ್ತೂರಿನಲ್ಲಿ ಸಂಭವಿಸಿದೆ. ಪುತ್ತೂರಿನ ಸಂಪ್ಯದಲ್ಲಿ ಮನೆ ಮಾಡಿಕೊಂಡಿದ್ದ ದೇಜಪ್ಪ ಯಾನೆ ದಿವೀಶ್ ಮಡಿವಾಳ (45) ಮೃತಪಟ್ಟವರು. ಚಾರ್ವಾಕದ ಮೂಲ ಮನೆಯಲ್ಲಿ ನಡೆಯುತ್ತಿದ್ದ ದೈವಗಳ ಕಾರ್ಯಕ್ರಮಕ್ಕೆಂದು ವಿದೇಶದಿಂದ ಆಗಮಿಸಿದವರು ರವಿವಾರದ ರಾತ್ರಿ ಪುತ್ತೂರಿನ ಮನೆಗೆ ಬಂದಿ ದ್ದರು. ಸೋಮವಾರದ ಬೆಳಗ್ಗಿನ ಜಾವ ಹೃದಯಾಘಾತವಾಗಿದ್ದು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುದರೊಳಗೆ ಮೃತಪಟ್ಟಿದ್ದಾರೆ. ಡಿ. 28ರಂದು ವಿದೇಶಕ್ಕೆ ಮರಳುವವರಿದ್ದರು. ಮೃತರು ತಂದೆ, ಪತ್ನಿ ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.
ಕಮರಿಗೆ ಬಿದ್ದ ಕ್ರೇನ್ : ಚಾಲಕ ಸಾ*ವು
ಬಜಪೆ : ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಳಿಜಾರು ಪ್ರದೇಶದಲ್ಲಿ ಆಪರೇಟರ್ ನ ನಿಯಂತ್ರಣ ತಪ್ಪಿ, ರಾಜ್ಯ ಹೆದ್ದಾರಿ ಬದಿಯಲ್ಲಿರುವ ರಕ್ಷಣಾ ತಡೆಗೋಡೆಗೆ ಕ್ರೇನ್ ಢಿಕ್ಕಿ ಹೊಡೆದು ಕಮರಿಗೆ ಮಗುಚಿ ಬಿದ್ದ ಪರಿಣಾಮವಾಗಿ ಕ್ರೇನ್ ಆಪರೇಟರ್ ಮೃತಪಟ್ಟಿರುವ ಘಟನೆ ನಡೆದಿದೆ. ಯುಪಿ ಮೂಲದ ಅರುಣ್ ಕುಮಾರ್ ಜಾದವ್ ಮೃತಪಟ್ಟ ಕ್ರೇನ್ ಆಪರೇಟರ್ ಎಂದು ಗುರುತಿಸಲಾಗಿದೆ. ಕ್ರೇನ್ ಅಡಿಗೆ ಸಿಲುಕಿಕೊಂಡ ಚಾಲಕನನ್ನು ಮೇಲೆಕ್ಕೆತ್ತಲು ಇನ್ನೊಂದು ಕ್ರೇನ್ ಮೂಲಕ ಸುಮಾರು ಅರ್ಧ ಗಂಟೆಗಳ ಕಾರ್ಯಾಚರಣೆ ಮಾಡಲಾಗಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಿದ್ದಾರೆ.
ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿ ಸಾಮಾಗ್ರಿಗಳ ಸಮಸ್ಯೆ ಬಗೆಹರಿಸುವಂತೆ ಮನವಿ
ಕುಂದಾಪುರ : ಉಡುಪಿ ಜಿಲ್ಲೆಯಾದ್ಯಂತ ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಾದ (ಜೆಲ್ಲಿ , ಮರಳು, ಕಲ್ಲು ) ಸರಿಯಾಗಿ ದೊರೆಯದ ಕಾರಣ ಕಟ್ಟಡ ನಿರ್ಮಾಣದ ಕಾರ್ಮಿಕರ ಕುಟುಂಬ ಬೀದಿಗೆ ಬರಬೇಕಾದ ಸ್ಥಿತಿ ಉಂಟಾಗಿದ್ದು, ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ನೀಡಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡುವಂತೆ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘದ ಅಧ್ಯಕ್ಷ ಗಿರೀಶ್ ಕುಂದಾಪುರ ಆಗ್ರಹಿಸಿದ್ದು, ಒಂದು ವೇಳೆ ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಜಿಲ್ಲೆಯಾದ್ಯಂತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಸಂಘಟನೆ ವತಿಯಿಂದ ಉಗ್ರವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು.
ವೃದ್ಧೆಯ ಸರ ಕಳ್ಳತನಗೈದಿದ್ದ ಆರೋಪಿಯ ಬಂಧನ
ಮಂಗಳೂರು : ಒಂಟಿ ವೃದ್ಧೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಸರ ಕಳ್ಳತನಗೈದು ಪರಾರಿಯಾಗಿದ್ದ ಆರೋಪಿಯನ್ನು ಮಂಗಳೂರು ಬಜಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹಳೆಯಂಗಡಿ ಇಂದಿರಾ ನಗರದ ನಿವಾಸಿ ಶೈಮಾ ಮಂಜಿಲ್ನ ಅಬ್ದುಲ್ ರವೂಫ್ ಯಾನೆ ಆಟೋ ರವೂಫ್ ಎಂದು ಗುರುತಿಸಲಾಗಿದೆ. ಆರೋಪಿಯು, ಡಿಸೆಂಬರ್ 12ರ ಮಧ್ಯಾಹ್ನ ತೆಂಕ ಎಡಪದವು ಗ್ರಾಮದ ಶಿಬ್ರಿಕೆರೆ ಗಣೇಶ್ ಮಿಲ್ ಬಳಿಯ ಒಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ವೃದ್ಧೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಸ್ಕೂಟರ್ ನಲ್ಲಿ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸೆಳೆದುಕೊಂಡು ಹೋಗಿದ್ದಾನೆ.
ಸೀತಾ ನದಿಯಲ್ಲಿ ಅಕ್ರಮ ಮರಳುಗಾರಿಕೆ!
ಬ್ರಹ್ಮಾವರ : ಕುದಿ ಗ್ರಾಮದ ಸೀತಾ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆದಿರುವುದು ಪತ್ತೆಯಾಗಿದೆ. ಮಂಜುನಾಥ ಅವರ ಸೂಚನೆಯಂತೆ ಜೆಸಿಬಿಯ ಮುಖಾಂತರ ಟಿಪ್ಪರ್ಗೆ ಮರಳನ್ನು ತುಂಬಿಸಿ ಸಾಗಿಸುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಬ್ರಹ್ಮಾವರದ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.
ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಬಹುಭಾಷಾ ನಟಿ ಕೃತಿ ಶೆಟ್ಟಿ
ಉಡುಪಿ : ಖ್ಯಾತ ಬಹುಭಾಷಾ ನಟಿ ಕೃತಿ ಶೆಟ್ಟಿ ಅವರು ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವರ ಅನುಗ್ರಹ ಪಡೆದು, ದೇವಸ್ಥಾನದ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ.
ಉಡುಪಿ: ಖಾಯಂ ಜಾಹಿರಾತು ಫಲಕಗಳಲ್ಲಿ ಅನುಮತಿ ಸಂಖ್ಯೆ ಕಡ್ಡಾಯ
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾ ಗಿರುವ ಖಾಯಂ ಜಾಹಿರಾತು ಫಲಕಗಳಲ್ಲಿ ನಗರಸಭೆಯಿಂದ ನೀಡಲಾಗುವ ಅನುಮತಿ ಸಂಖ್ಯೆ ಮತ್ತು ದಿನಾಂಕವನ್ನು ದಾಖಲಿಸುವುದು ಕಡ್ಡಾಯವಾಗಿದೆ. ಆದರೆ ಹಲವಾರು ಖಾಯಂ ಜಾಹಿರಾತುದಾರರು ತಮ್ಮ ಜಾಹಿರಾತು ಫಲಕಗಳಲ್ಲಿ ಅನುಮತಿ ಸಂಖ್ಯೆಯನ್ನು ನಮೂದಿಸದೇ ಇರುವುದು ಕಂಡು ಬಂದಿದ್ದು, ಖಾಯಂ ಜಾಹಿರಾತು ಫಲಕಗಳಲ್ಲಿ ಅನುಮತಿ ಸಂಖ್ಯೆ ಮತ್ತು ದಿನಾಂಕವನ್ನು ನಮೂದಿಸದೇ ಇರುವವರು ಡಿಸೆಂಬರ್ ೨೩ರ ಒಳಗಾಗಿ ದಾಖಲಿಸಬೇಕು. ದಾಖಲಿಸದೇ ಇರುವ ಜಾಹಿರಾತು ಫಲಕಗಳನ್ನು ಅನಧಿಕೃತ ವೆಂದು ಭಾವಿಸಿ, ನಗರಸಭೆ ವತಿಯಿಂದ ತೆರವುಗೊಳಿಸಲು ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಡಿ.21ರಿಂದ ಜ.19ರವರೆಗೆ ‘ಕರಾವಳಿ ಉತ್ಸವ’ : ಸ್ಪೀಕರ್ ಯು.ಟಿ.ಖಾದರ್
‘ಕರಾವಳಿ ಭಾಗದ ಸಂಸ್ಕೃತಿ, ಸಂಪ್ರದಾಯಗಳ ಪ್ರದರ್ಶನ ಹಾಗೂ ಆಹಾರ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಇದೇ ತಿಂಗಳ 21ರಿಂದ 2025ರ ಜನವರಿ 19ರ ವರೆಗೆ ಒಂದು ತಿಂಗಳ ಕಾಲ ‘ಕರಾವಳಿ ಉತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ. ಸುವರ್ಣ ವಿಧಾನಸೌಧದಲ್ಲಿನ ಸ್ಪೀಕರ್ ಕೊಠಡಿಯಲ್ಲಿ ‘ಕರಾವಳಿ ಉತ್ಸವ’ದ ಲಾಂಛನ (ಲೋಗೋ) ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ಡಿ.21ರ ಸಂಜೆ 5.30ಕ್ಕೆ ‘ಕರಾವಳಿ ಉತ್ಸವ’ಕ್ಕೆ ಚಾಲನೆ ನೀಡಲಾಗುವುದು. ಕರಾವಳಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 50ಲಕ್ಷ ರೂ. ಮತ್ತು ಪ್ರವಾಸೋದ್ಯಮ ಇಲಾಖೆ 20ಲಕ್ಷ ರೂ.ಬಿಡುಗಡೆ ಮಾಡಿವೆ. ಉಳಿದಂತೆ ಮುಡಾ, ಕ್ರೆಡೈ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಹಣಕಾಸಿನ ನೆರವು ಸಿಗುವ ವಿಶ್ವಾಸವಿದೆ ಎಂದು ನುಡಿದರು. ಮಂಗಳೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರಾವಳಿ ಉತ್ಸವ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಜನರಿಗೆ ಅನುಕೂಲವಾಗುವ, ನಮ್ಮ ಕರಾವಳಿಯ ಸಂಸ್ಕೃತಿಯನ್ನು ರಾಜ್ಯದ ಬೇರೆ ಜಿಲ್ಲೆಗಳಿಗೆ, ಬೇರೆ ರಾಜ್ಯಗಳಿಗೆ ಪರಿಚಯಿಸುವ ಉದ್ದೇಶವನ್ನು ‘ಕರಾವಳಿ ಉತ್ಸವ’ ಹೊಂದಿದೆ. ಅಲ್ಲದೆ, ಜನರ ನಡುವೆ ಪರಿಸ್ಪರ ಸೌಹಾರ್ದತೆ ಮೂಡಿಸಲು ಕರಾವಳಿ ಉತ್ಸವ ಸಹಕಾರಿಯಾಗಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ‘ಜಾಗತಿಕ ಹಳ್ಳಿ ಎಂಬ ಧ್ಯೇಯದೊಂದಿಗೆ ವಸ್ತು ಪ್ರದರ್ಶನ, ಆಹಾರ ಮೇಳ, ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಡಿ.28 ಮತ್ತು 29ರಂದು ತಣ್ಣೀರು ಬಾವಿ ಬೀಚ್ನಲ್ಲಿ ‘ಬೀಚ್ ಉತ್ಸವ’ ಆಯೋಜಿಸಲಾಗಿದೆ. ಡಿ.28ಕ್ಕೆ ಸಂಜೆ 6 ಗಂಟೆಗೆ ಬೀಚ್ ಉತ್ಸವ ಉದ್ಘಾಟನೆಗೊಳ್ಳಲಿದ್ದು 6.30ರಿಂದ ವಿವಿಧ ತಂಡಗಳ ನೃತ್ಯ ಪ್ರದರ್ಶನ ಇರಲಿದೆ. ಸಂಜೆ 8 ಗಂಟೆಗೆ ಗಾಯಕ ರಘು ದೀಕ್ಷಿತ್ ತಂಡ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

