ಮಂಗಳೂರು: ನಗರದ ಬೋಳಾರದ ಸಿಟಿ ಬೀಚ್ನಲ್ಲಿ ಇಂದು ಸಂಜೆ ನ್ಯೂ ಇಯರ್ ಆಚರಣೆಗೂ ಮೊದಲೇ ನಡೆಯಬೇಕಿದ್ದ ಇಸ್ರೇಲ್ ಮೂಲದ ಪ್ರಖ್ಯಾತ ಸಂಗೀತಗಾರ ಸಜಂಕಾ ಡಿಜೆ ಕಾರ್ಯಕ್ರಮ ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಆಗಿದೆ. ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ಬೆನ್ನಲ್ಲೇ ಇದೀಗ ಕಾರ್ಯಕ್ರಮ ರದ್ದಾಗಿರುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಕಡಲನಗರಿ ಮಂಗಳೂರಿನಲ್ಲಿ ನ್ಯೂ ಇಯರ್ ಆಚರಣೆಗೂ ಮೊದಲೇ ಪಾರ್ಟಿಗಳಿಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇಸ್ರೇಲ್ ಮೂಲದ ಪ್ರಖ್ಯಾತ ಸಂಗೀತಗಾರ ಸಜಂಕಾ ಡಿಜೆ ಕುಣಿತದಲ್ಲಿ ಹಿಂದೂ ದೇವರ ಅವಹೇಳನ ಆರೋಪ ಕೇಳಿಬಂದಿತ್ತು. ಹೀಗಾಗಿ ಭಜರಂಗದಳ, ಹಿಂದೂ ಜಾಗರಣಾ ವೇದಿಕೆಯಿಂದ ಕಾರ್ಯಕ್ರಮ ತಡೆಯುವ ಎಚ್ಚರಿಕೆ ನೀಡಿತ್ತು. ಮಂಗಳೂರು ಪೊಲೀಸರಿಗೂ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಸಂಘಟನೆಗಳು ಮನವಿ ಮಾಡಿದ್ದವು.
ಕಾರ್ಯಕ್ರಮ ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿದ ಆರೋಪ ಕೇಳಿಬಂದಿದ್ದು, ಬಜರಂಗದಳ ಕಾರ್ಯಕ್ರಮದಲ್ಲಿ ಭಾರೀ ಪ್ರಮಾಣದ ಡ್ರಗ್ಸ್ ಪೂರೈಕೆ ಅನುಮಾನ ವ್ಯಕ್ತಪಡಿಸಿದೆ. ಮೃತ್ಯುಂಜಯ ಮಹಾ ಮಂತ್ರ, ರಾಮತಾರಕ ಮಂತ್ರ, ವಿಷ್ಣು ಸಹಸ್ರನಾಮ, ಗಾಯತ್ರಿ ಮಂತ್ರ, ದುರ್ಗಾ ಸಪ್ತತಿ ಮಂತ್ರ ಸೇರಿದಂತೆ ಶೋಕ, ಮಂತ್ರಗಳನ್ನು ಮತ್ತು ದೇವರ ಹಾಡುಗಳನ್ನು ವಿಚಿತ್ರವಾಗಿ ವಿಡಂಬನೆ ಮಾಡುವ ಮೂಲಕ ಧಾರ್ಮಿಕ ಭಾವನೆಗೆ ನಿಂದನೆ ಆರೋಪ ಮಾಡಲಾಗಿತ್ತು.
ಇಷ್ಟೆಲ್ಲಾ ವಿರೋಧಧ ಕೂಡ ಮಂಗಳೂರಿನ ಸಜಂಕಾ ಲೈವ್ ಕಾರ್ಯಕ್ರಮದ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಕಾರ್ಯಕ್ರಮದ ಬಹುತೇಕ ಸಿದ್ದತೆಗಳು ಪೂರ್ಣಗೊಂಡಿದ್ದವು. ಮಂಗಳೂರಿಗೆ ಡಿಜೆ ಸಜಂಕಾ ಆಗಮಿಸಿದ್ದು, ಕಾರ್ಯಕ್ರಮದ ಬಳಿ ಹಿಂದೂ ಸಂಘಟನೆಗಳ ಪ್ರತಿಭಟನೆ ಹಿನ್ನಲೆ ಕಾರ್ಯಕ್ರಮ ರದ್ದು ಮಾಡಲಾಗಿದೆ.

