ಬೆಳ್ತಂಗಡಿ: ಭಾರತವು ಆಧ್ಯಾತ್ಮಿಕತೆಯ ತವರೂರಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಅದರ ಪ್ರತಿಬಿಂಭವಾಗಿದೆ. ಶ್ರೀ ಸಾಮಿಧ್ಯ ಭವ್ಯ ಕ್ಯೂ ಕಾಂಪ್ಲೆಕ್ಸ್ ಕೇವಲ ಕಟ್ಟಡ ಮಾತ್ರವಾಗಿರದೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಶ್ರೀ ಮಂಜುನಾಥ ಸ್ವಾಮಿ ಹಾಗೂ ಭಕ್ತರ ಜತೆಗಿನ ಭಾವನಾತ್ಮಕ ಸಂಭಂದವನ್ನು ಜೋಡಿಸಿದೆ ಎಂದು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರಿಗೆ ದೇವರ ದರ್ಶನಕ್ಕಾಗಿ ಆರಾಮದಾಯಕ ಸರತಿಸಾಲಿನ ನೂತನ ಸಂಕೀರ್ಣ ಶ್ರೀ ಸಾನ್ನಿಧ್ಯ ಕಟ್ಟಡವನ್ನು ಜ.7 ರಂದು ಉದ್ಘಾಟಿಸಿ ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಯೋಜನೆಯ 2024-25 ರ ಜ್ಞಾನದೀಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಕ್ಷೇತ್ರವು ಗ್ರಾಮೀಣ ಭಾರತದ ನಾಡಿ ಮಿಡಿತವಾಗಿದೆ. ಸಂವಿಧಾನಾತ್ಮಕ ಶಿಕ್ಷಣ, ಆರೋಗ್ಯ ಸೇರಿದಂತೆ ಚತುರ್ದಾನದ ಮೂಲಕ ಒಂದು ಕ್ಷೇತ್ರವು ಎಲ್ಲವನ್ನು ಪ್ರತಿನಿಧಿಸುವ ಮೂಲಕ ಸರ್ವಧರ್ಮ ಸಮನ್ವಯ ಕ್ಷೇತ್ರವಾಗಿ ಬೆಳಗಿದೆ. ಪ್ರಪಂಚವು ಡಿಜಿಟಲ್ ಕ್ರಾಂತಿಯಲ್ಲಿದ್ದು, ಅತ್ಯಾಧುನಿಕ ತಂತ್ರಜ್ಞಾನದೆಡೆ ಭಾರತವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಮಾನವೀಯ ಮೌಲ್ಯ, ಸಂಸ್ಕೃತಿ, ಆಧ್ಯಾತ್ಮಿಕ ಆಧ್ಯತೆಯೊಂದಿಗೆ ಭವ್ಯ ಭಾರತವಾಗಿ ಯುವ ಸಮುದಾಯನ್ನು ಪ್ರತಿನಿಧಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ ಮಾತನಾಡಿ, ಭಕ್ತರೇ ದೇವರು ಎಂಬ ಕಲ್ಪನೆಯಡಿ ಹಿಂದಿನಿಂದ ಇಂದಿನವರೆಗೂ ಚತುರ್ದಾನ ಪರಂಪರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮುನ್ನಡೆಸುತ್ತಾ ಬಂದಿದೆೆ. ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಮೂಲಕ ಹವಮಾನಕ್ಕೆ ಆಧಾರಿತವಾಗಿ ಸುಧಾರಣೆ ಮೂಲಕ ಆಧುನಿಕ ತಂತ್ರಜ್ಞಾನ, ಭದ್ರತೆಯನ್ನು ಅಳವಡಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಸಲುವಾಗಿ ಜ್ಞಾನದೀಪ ಕಾರ್ಯಕ್ರಮದ ಮೂಲಕ ಸಾವಿರಾರು ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಉಪರಾಷ್ಟ್ರಪತಿಯವರನ್ನು ಡಾ| ಹೆಗ್ಗಡೆ ಗೌರವಿಸಿದರು, ಡಾ| ಸುದೇಶ್ ಧನ್ಕರ್ ಅವರನ್ನು ಹೇಮಾವತಿ ವೀ.ಹೆಗ್ಗಡೆಯವರು ಗೌರವಿಸಿದರು.
ಮುಖ್ಯ ಅತಿಥಿ ಡಾ| ಸುದೇಶ್ ಧನ್ಕರ್, ಜ್ಞಾನವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮ ಅಧ್ಯಕ್ಷೆ ಡಾ| ಹೇಮಾವತಿ ವೀ.ಹೆಗ್ಗಡೆ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸನ ಹರೀಶ್ ಪೂಂಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ಕುಮಾರ್ ಎಸ್.ಎಸ್., ಡಿ.ಸುರೇಂದ್ರ ಕುಮಾರ್, ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆ ಜನರ ಧ್ವನಿಯಾಗಿದ್ದು, ಅದರ ಗೌರವಯುತ ಸ್ಥಾನವನ್ನು ಕಾಪಾಡುವಲ್ಲಿ ರಾಜಕೀಯ ವ್ಯವಸ್ಥೆ ಜತೆಗೆ ಜನತೆಯೂ ಅದರ ಜ್ಞಾನವನ್ನು ಅರಿಯಬೇಕಿದೆ. ಭಾರತವು ವಿವಿಧತೆಯಲ್ಲಿ ಏಕತೆಯ ಸಾರವಾಗಿದ್ದು ನಾವು ಜಗತ್ತನ್ನೇ ನಮ್ಮ ತನದಿಂದ ಕಾಣುವವರು. ಶ್ರೀ ಕ್ಷೇತ್ರ ಧರ್ಮಸ್ಥಳ ಮಾದರಿ ಕ್ಷೇತ್ರದಲ್ಲಿ ಶ್ರೀ ಸಾನಿಧ್ಯ ಕಟ್ಟಡ ಲೋಕಾರ್ಪಣೆಗೆ ಅವಕಾಶ ಕಲ್ಪಿಸಿರುವ ರಾಜ್ಯಸಭಾ ಸದಸ್ಯರಾಗಿರುವ ಧರ್ಮಾಧಿಕಾರಿಯವರನ್ನು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅಭಿನಂದಿಸಿದರು.
2,75,177 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಶ್ರೀ ಸಾನ್ನಿಧ್ಯ ಸಂಕೀರ್ಣ ಸರತಿಸಾಲಿನ ಎರಡು ಅಂತಸ್ತುಗಳನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಭಕ್ತರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. 10 ರಿಂದ 12 ಸಾವಿರ ಭಕ್ತರಿಗೆ ಆರಾಮದಾಯಕ ಆಸನ ವ್ಯವಸ್ಥೆ ನೀಡಲಾಗಿದೆ. ಪ್ರತಿ ಭವನದಲ್ಲಿ 800 ಮಂದಿ ತಂಗಲು ಅವಕಾಶವಿರುವ 16 ವಿಶಾಲ ಭವನಗಳು ಶ್ರೀ ಸಾನ್ನಿಧ್ಯದಲ್ಲಿವೆ.

