ಉಡುಪಿ: ಇತ್ತೀಚೆಗೆ ಮದುವೆಯ ಮುನ್ನ ನವ ಜೋಡಿಗಳ ಫ್ರೀ ವೆಡ್ಡಿಂಗ್ ಶೂಟ್ ಮಾಡಿಸುವುದು ಒಂದು ಟ್ರೆಂಡ್ ಆಗಿಬಿಟ್ಟಿದೆ. ಇದಕ್ಕಾಗಿ ಫೋಟೋ ಶೂಟ್ ಪೂರಕವಾಗುವಂತೆ ನಾವು ಕೆಲವು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಸಾಂಪ್ರದಾಯಿಕ ರೀತಿಯ ವೆಡ್ಡಿಂಗ್ ಶೂಟ್ ಗೆ ಕೆಲವು ದೇವಸ್ಥಾನಗಳನ್ನು ಆಯ್ದುಕೊಳ್ಳುತ್ತೇವೆ. ಆದರೆ ಇಂತಹ ಚಿತ್ರೀಕರಣಕ್ಕೆ ಧಾರ್ಮಿಕ ಕ್ಷೇತ್ರಗಳನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ವಿರೋಧಗಳು ವ್ಯಕ್ತವಾಗುತ್ತಿದೆ.
ಆದ್ದರಿಂದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಥವಾ ರಥಬೀದಿಯಲ್ಲಿ ಫೋಟೋಶೂಟ್ ಮಾಡಿಕೊಳ್ಳುವಂತಿಲ್ಲ ಎಂದು ಮಠದ ಅಧಿಕಾರಿಗಳು ಖಡಕ್ ಆಗಿ ಆದೇಶವನ್ನು ಹೊರಡಿಸಿದ್ದಾರೆ. ಜೋಡಿಗಳು ಚಿತ್ರೀಕರಣದ ಹೆಸರಿನಲ್ಲಿ ಧಾರ್ಮಿಕ ಸ್ಥಳದಲ್ಲಿ ಸರಸ ಸಲ್ಲಾಪದಲ್ಲಿ ತೊಡಗುತ್ತಾರೆ. ಇದು ಬರುವ ಭಕ್ತರಿಗೂ ಕೂಡಾ ನೋಡಲು ಅಭಾಸವಾಗಿ ಕಾಣುತ್ತದೆ. ನಮ್ಮ ಸಂಪ್ರದಾಯಗಳಿಗೆ ಇದೆಲ್ಲ ಶೋಭೆ ತರುವುದಿಲ್ಲ. ಆದ್ದರಿಂದ ಅಗತ್ಯ ಕ್ರಮ ಕೈಗೊಳ್ಳಲೇ ಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟ ಮಠಾಧೀಶರು ಓಡಾಡುವ ಜಾಗ ರಥಬೀದಿ. ಆದರೆ ಇಲ್ಲಿ ಇತ್ತೀಚೆಗೆ ಕೇವಲ ಊರಿನವರು ಮಾತ್ರವಲ್ಲದೆ ಉತ್ತರ ಕರ್ನಾಟಕದ ಫೋಟೋಗ್ರಾಫರ್ಸ್, ಜೋಡಿಗಳು ಬಂದು ಫೋಟೋಶೂಟ್ ಮಾಡಿಸುವುದು, ಅಸಭ್ಯ ವರ್ತನೆ ತೋರುವುದು ಹೆಚ್ಚಾಗುತ್ತಿದೆ. ಸರಸಸಲ್ಲಾಪಗಳು ಮುಜುಗರ ತರುತ್ತಿದೆ ಇದಕ್ಕೆಲ್ಲ ಕಡಿವಾಣ ಹಾಕಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಠ ಅಧಿಕೃತವಾಗಿ ಹೇಳಿಕೆ ನೀಡಿದೆ.

