ನವದೆಹಲಿ: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೆತ್ತಿಕೊಂಡಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
ಕೇಂದ್ರ ಹೆದ್ದಾರಿ, ಭೂಸಾರಿಗೆ ಇಲಾಖೆ ಈ ಅಧಿಸೂಚನೆ ಹೊರಡಿಸಿದ್ದು ಮೇ.೫ರಿಂದಲೇ ಗಾಯಾಳುಗಳು ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಅಪಘಾತ ನಡೆದ ದಿನದಿಂದ ಏಳು ದಿನಗಳವರೆಗೆ ಒಂದೂವರೆ ಲಕ್ಷ ರೂಪಾಯಿವರೆಗೂ ಕ್ಯಾಶ್ ಲೆಸ್ ಚಿಕಿತ್ಸಾ ಸೌಲಭ್ಯ ದೊರೆಯಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತಿಳಿಸಿದೆ.
ಅಪಘಾತಕ್ಕೀಡಾದವರು ಕೂಡಲೇ ಮುಂಗಡ ಹಣ ಪಾವತಿಸದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ವೈದ್ಯಕೀಯ ವರದಿ, ಎಫ್ಐಆರ್ ನ ಪ್ರತಿಗಳನ್ನು ಇಟ್ಟುಕೊಳ್ಳುವ ಮೂಲಕ ಹೆಚ್ಚಿನ ಕ್ಲೇಮುಗಳನ್ನು ಪಡೆದುಕೊಳ್ಳಬಹುದು.

