ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯ ಅಪರೇಷನ್ ಸಿಂದೂರಕ್ಕೆ ಕಂಗೆಟ್ಟು ಹೋಗಿದ್ದ ಪಾಕಿಸ್ತಾನ ಕೊನೆಗೂ ಕದನ ವಿರಾಮಕ್ಕಾಗಿ ಭಾರತದ ಜತೆ ಗೋಗರೆದಿದ್ದು, ಅದರಂತೆ ಉಭಯ ದೇಶಗಳ ನಡುವಿನ ನೇರ ಮಾತುಕತೆಯಂತೆ ಶನಿವಾರ(ಮೇ 10) ಸಂಜೆ 5ಗಂಟೆಯಿಂದ ಕದನ ವಿರಾಮಕ್ಕೆ ಸಮ್ಮತಿಸಲಾಗಿದೆ ಎಂದು ಕೇಂದ್ರ ಸರ್ಕಾರ ದೃಢಪಡಿಸಿದೆ.
ಇಂದು ಮಧ್ಯಾಹ್ನ 3.30ಕ್ಕೆ ಪಾಕಿಸ್ತಾನದ ಅಧಿಕಾರಿಗಳು ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ ಗೆ ಕರೆ ಮಾಡಿ, ಕದನ ವಿರಾಮಕ್ಕೆ ಮನವಿ ಮಾಡಿದ್ದರು. ಅದರಂತೆ ಸಂಜೆ 5 ಗಂಟೆಯಿಂದ ಕದನ ವಿರಾಮ ಜಾರಿಗೆ ಬರಲಿದೆ. ಎರಡು ದೇಶಗಳ ನಡುವೆ ನೇರವಾಗಿ ಒಪ್ಪಂದಕ್ಕೆ ಬಂದಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿರುವ ಬಗ್ಗೆ ವರದಿಯಾಗಿದೆ.
ಕದನ ವಿರಾಮ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಮಾತುಕತೆ ನಡೆಯಲಿದೆ ಎಂದು ಭಾರತ ತಿಳಿಸಿದೆ.
ಉಭಯ ದೇಶಗಳ ನಡುವೆ ನಡೆಯುತ್ತಿರುವ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದರೆ ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧದ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ತಕ್ಷಣದ ಕದನ ವಿರಾಮವನ್ನು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದರು.


