ಕಡಬ: ಕರಾವಳಿಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸಂಘಟನೆಗಳ ಪ್ರಮುಖರ ಮನೆಗಳಿಗೆ ಹೋಗಿ ಪೊಲೀಸರು ಮಾಹಿತಿ ದಾಖಲಿಸುತ್ತಿರುವ ವಿಚಾರವನ್ನು ಖಂಡಿಸಿ ಹಿಂದೂ ಸಂಘಟನೆಯ ಸುಮಾರು ಹದಿನೈದು ಮಂದಿ ಕಾರ್ಯಕರ್ತರು ಪೊಲೀಸ್ ಠಾಣಾ ಎದುರು ಜಮಾಯಿಸಿದ್ದಾರೆ. ಇವರ ವಿರುದ್ಧ ಪ್ರಕರಣ ಕೂಡಾ ದಾಖಲಾಗಿದೆ.
ದ.ಕ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಆದೇಶದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಘಟನೆಗಳ ಪ್ರಮುಖರ ಮನೆಗೆ ಹೋಗಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದರು. ಇದನ್ನು ಸಹಿಸಲಾಗದೆ ಕಾರ್ಯಕರ್ತರು ಪೊಲೀಸರು ಮನೆಗೆ ಬರೋದು ಬೇಡ. ನಾವೇ ಬರ್ತೇವೆ. ಇದರಿಂದ ನಮ್ಮ ಮನೆಯವರಿಗೂ ತೊಂದ್ರೆ ಆಗ್ತಿದೆ. ವಿಚಾರಣೆ ಹೆಸರಿನಲ್ಲಿ ನಮ್ಮ ಫೋಟೋ ತೆಗೆದುಕೊಂಡು ಹೋಗಿ ರೌಡಿಗಳಂತೆ ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.
ಪೊಲೀಸರ ಜೊತೆ ಕಾರ್ಯಕರ್ತರಿಗೆ ವಾಗ್ವಾದ ನಡೆಯಿತು. ಕಡಬ ಎಸ್.ಐ ಅಭಿನಂದನ್ ಅವರು ನಾವು ಪೊಲೀಸ್ ಅಧಿಕಾರಿಗಳ ಆದೇಶವನ್ನು ಪಾಲಿಸುತ್ತಿದ್ದೇವೆ. ರಾತ್ರಿ ವೇಳೆ ಠಾಣೆ ಮುಂದೆ ಸೇರೋದು ಸರಿಯಲ್ಲ ಎಂದು ಸಮಾಧಾನಿಸಿ ಮನೆಗೆ ಕಳುಹಿಸಿದ್ದಾರೆ.

