ಉಡುಪಿ: ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಹೈಕೋರ್ಟ್ ಪೀಠವನ್ನು ಉಡುಪಿಯಲ್ಲಿಯೇ ಸ್ಥಾಪಿಸಬೇಕೆಂದು ಆಗ್ರಹಿಸಿ, ಉಡುಪಿ ಜಿಲ್ಲಾ ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ವತಿಯಿಂದ ಅಕ್ಟೋಬರ್ 17ರಂದು ಬೆಳಿಗ್ಗೆ 10:30ಕ್ಕೆ ಬ್ರಹ್ಮಾವರದ ಬಂಟರ ಭವನದಲ್ಲಿ ತಾಲೂಕು ಮಟ್ಟದ ಬೃಹತ್ ಹಕ್ಕೊತ್ತಾಯ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಹಾಗೂ ವಕೀಲ ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಬೇಡಿಕೆಯನ್ನು ಪರಿಶೀಲಿಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೆಪ್ಟೆಂಬರ್ 29ರಂದು ತ್ರಿ ಸದಸ್ಯ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿರುವುದನ್ನು ಸ್ವಾಗತಿಸಿದರು. ನ್ಯಾಯಮೂರ್ತಿಗಳಾದ ಅನು ಶಿವರಾಮನ್, ಎಸ್.ಜಿ. ಪಂಡಿತ್ ಹಾಗೂ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ಈ ಸಮಿತಿಯು ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲೆಯು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮಧ್ಯಭಾಗದಲ್ಲಿದ್ದು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಹಲವು ತಾಲೂಕುಗಳಿಗೂ ಸಮೀಪದಲ್ಲಿದೆ. ಹೀಗಾಗಿ, ಕರಾವಳಿ ಭಾಗಕ್ಕೆ ಉದ್ದೇಶಿತ ಸಂಚಾರಿ ಅಥವಾ ಶಾಶ್ವತ ಹೈಕೋರ್ಟ್ ಪೀಠವನ್ನು ಉಡುಪಿಯಲ್ಲೇ ಸ್ಥಾಪಿಸುವುದು ಭೌಗೋಳಿಕವಾಗಿ ಅತ್ಯಂತ ಸೂಕ್ತವಾಗಿದೆ ಎಂಬುದು ಸಮಿತಿಯ ಪ್ರಮುಖ ಆಗ್ರಹವಾಗಿದೆ.
ಪ್ರಸ್ತುತ ಕರಾವಳಿ ಭಾಗದ ಸಾವಿರಾರು ಕಕ್ಷಿದಾರರು ಪ್ರಕರಣಗಳ ವಿಚಾರಣೆಗಾಗಿ ಬೆಂಗಳೂರಿನ ಹೈಕೋರ್ಟ್ಗೆ ತೆರಳಬೇಕಾದ ಅನಿವಾರ್ಯತೆಯಿದೆ. ಉಡುಪಿಯಲ್ಲಿ ಪೀಠ ಸ್ಥಾಪನೆಯಾದರೆ ಸುದೀರ್ಘ ಪ್ರಯಾಣ ತಪ್ಪಲಿದ್ದು, ಸಾರ್ವಜನಿಕರ ಸಮಯ, ಶ್ರಮ ಹಾಗೂ ಹಣಕಾಸಿನ ವೆಚ್ಚ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಜತೆಗೆ ಪ್ರಾದೇಶಿಕ ಮಟ್ಟದಲ್ಲೇ ನ್ಯಾಯದಾನ ವ್ಯವಸ್ಥೆ ಲಭ್ಯವಾಗುವುದರಿಂದ ಜನ ಸಾಮಾನ್ಯರಿಗೆ ನ್ಯಾಯ ಸಿಗುವುದು ಇನ್ನಷ್ಟು ಸುಲಭವಾಗಲಿದೆ ಎಂದು ಪ್ರೇಮ್ ಪ್ರಸಾದ್ ಶೆಟ್ಟಿ ಹೇಳಿದರು.
ಪೀಠ ಸ್ಥಾಪನೆಯ ಹೋರಾಟಕ್ಕೆ ಸಾರ್ವಜನಿಕ ಬೆಂಬಲ ಕ್ರೋಢೀಕರಿಸುವುದು ಹಾಗೂ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದೆ. ಜಿಲ್ಲೆಯ ವಕೀಲರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ ಮತ್ತು ರಾಜಕೀಯ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಶೇಖರ್ ಹಾವಂಜೆ, ಆಲ್ವಿನ್ ಅಂದ್ರಾದೆ, ಮಹೇಶ್ ತಡೆಕಲ್ಲು ಹಾಗೂ ರವಿರಂಜನ್ ಶೆಟ್ಟಿ ಉಪಸ್ಥಿತರಿದ್ದರು.

