ನವದೆಹಲಿ: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ಆವರಣದಲ್ಲಿ ರಾಜಕೀಯ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ‘ಇಂಡಿ’ (INDIA) ಒಕ್ಕೂಟದ ನಾಯಕರ ವಿರುದ್ಧ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಜೆಐ ನೇತೃತ್ವದ ಪೀಠವು ಕಟು ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದು, “ನ್ಯಾಯಾಂಗವನ್ನು ಯಾರೂ ಸೋಲಿಸಲು ಅಥವಾ ಬೆದರಿಸಲು ಸಾಧ್ಯವಿಲ್ಲ. ಅರ್ಜಿಯ ವಿಚಾರಣೆಗೆ ನೋಟಿಸ್ ನೀಡಿದ್ದೇವೆ ಎಂದಾಕ್ಷಣ ರಾಜಕೀಯ ನಾಯಕರ ಈ ರೀತಿಯ ಅನುಚಿತ ವರ್ತನೆಯನ್ನು ನ್ಯಾಯಾಲಯ ಕ್ಷಮಿಸಿದೆ ಅಥವಾ ಒಪ್ಪಿಕೊಂಡಿದೆ ಎಂದು ಅರ್ಥವಲ್ಲ” ಎಂದು ಸ್ಪಷ್ಟಪಡಿಸಿತು. ಸಿಸಿಟಿವಿ ದೃಶ್ಯಾವಳಿ ಸಂರಕ್ಷಣೆಗೆ ಕಟ್ಟುನಿಟ್ಟಿನ ಆದೇಶ:ವಿಚಾರಣೆ ವೇಳೆ ಹಿರಿಯ ವಕೀಲ ಗೌರವ್ ಭಾಟಿಯಾ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ನಡೆದ ಘಟನೆಯನ್ನು ನ್ಯಾಯಪೀಠದ ಗಮನಕ್ಕೆ ತಂದರು. ಸುಪ್ರೀಂ ಕೋರ್ಟ್ ಸಂಕೀರ್ಣಕ್ಕೆ ರಾಜಕೀಯ ಮೆರವಣಿಗೆ ನಡೆಸುವುದು ಮತ್ತು ನೂರಾರು ಕಾರ್ಯಕರ್ತರೊಂದಿಗೆ ಘೋಷಣೆಗಳನ್ನು ಕೂಗುತ್ತಾ ನ್ಯಾಯಾಲಯದ ಮೇಲೆ ಒತ್ತಡ ಹೇರಲು ಯತ್ನಿಸುವುದು ಸಂಪೂರ್ಣ ಸ್ವೀಕಾರಾರ್ಹವಲ್ಲದ ನಡವಳಿಕೆ ಎಂದು ಆಕ್ಷೇಪಿಸಿದರು. ಈ ಮನವಿಯನ್ನು ಆಲಿಸಿದ ಪೀಠವು, ಸೋಮವಾರದ ಪ್ರತಿಭಟನೆಯ ವೇಳೆ ಸುಪ್ರೀಂ ಕೋರ್ಟ್ ಆವರಣ ಹಾಗೂ ಗೇಟ್ಗಳ ಬಳಿ ನಡೆದ ಎಲ್ಲಾ ವಿದ್ಯಮಾನಗಳ ಸಿಸಿಟಿವಿ ರೆಕಾರ್ಡಿಂಗ್ಗಳನ್ನು ಭದ್ರವಾಗಿ ಸಂರಕ್ಷಿಸಿಡಬೇಕು ಎಂದು ರಿಜಿಸ್ಟ್ರಾರ್ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು.
ದೆಹಲಿಯಲ್ಲಿ ಎಸ್ಐಆರ್ ವಿರೋಧಿ ಪ್ರತಿಭಟನೆ ಆರಂಭಿಸುವ ಮುನ್ನ ರಾಹುಲ್ ಗಾಂಧಿ ಅವರು ಸಿಜೆಐ ಅವರನ್ನು ನೇರವಾಗಿ ಭೇಟಿಯಾಗಲು ಸಮಯ ಕೋರಿದ್ದರು. ಆದರೆ, ಈ ವಿವಾದವು ಈಗಾಗಲೇ ನ್ಯಾಯಾಂಗ ಪರಿಶೀಲನೆಗೆ ಒಳಪಡುವ ವಿಷಯವಾಗಿದ್ದು, ಆಡಳಿತಾತ್ಮಕವಾಗಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಸೂಕ್ತ ಅರ್ಜಿಯ ಮೂಲಕವೇ ನ್ಯಾಯಪೀಠವನ್ನು ಸಂಪರ್ಕಿಸಿ ಎಂದು ಹೇಳಿ ಸಿಜೆಐ ಆ ಭೇಟಿಯ ವಿನಂತಿಯನ್ನು ತಿರಸ್ಕರಿಸಿದ್ದರು.

