ಅಲೊವೆರಾ ಅಥವಾ ಲೋಳೆರಸ ಯಾರಿಗೆ ತಾನೆ ಪರಿಚಯವಿಲ್ಲ ಹೇಳಿ. ತ್ವಚೆಯ ಆರೋಗ್ಯ, ಸೌಂದರ್ಯವನ್ನು ಯಾವುದೇ ಕೆಮಿಕಲ್ ಬಳಸದೆ ಕಾಪಾಡಿಕೊಳ್ಳಬೇಕೆಂದು ಬಯಸುವವರಿಗೆ ಅಲೊವೆರಾ ಬಳಕೆ ಹೆಚ್ಚು ಪ್ರಯೋಜನಕಾರಿ ಎನ್ನಬಹುದು.
ಚರ್ಮದ ಗಾಯಗಳನ್ನು ಗುಣಪಡಿಸುವ, ಆರೈಕೆ ಮಾಡುವ ಶಕ್ತಿ ಅಲೊವೆರಾದಲ್ಲಿ ಇದೆ. ಮುಖದ ಮೇಲಿರುವ ಸುಕ್ಕುಗಳು, ಗುಳ್ಳೆಗಳ ಶಮನಕ್ಕೂ ಅಲೊವೆರಾದ ಜೆಲ್ ರಾಮಬಾಣವೇ ಸರಿ. ಸುಟ್ಟ ಗಾಯಗಳ ಮೇಲೆ ಅಲೊವೆರಾ ಹಚ್ಚುವುದರಿಂದ ತಂಪಾಗುವ ಜೊತೆಗೆ ಶೀಘ್ರ ಶಮನಕ್ಕೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೈಸರ್ಗಿಕ ರೀತಿಯಲ್ಲಿ ಸೌಂದರ್ಯ ಕಾಪಾಡಿಕೊಳ್ಳಲು ಅಲೊವೆರಾ ಎಲೆಯೊಳಗಿನ ಲೋಳೆ ಉತ್ತಮ ಮದ್ದು.
ಮುಖದ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಿ, ಕಲೆಗಳನ್ನು ಮರೆಯಾಗಿಸುವಲ್ಲಿಯೂ ಅಲೊವೆರಾದ ಪಾತ್ರ ಅಪಾರ. ಚರ್ಮದ ಮೇಲಿನ ಉರಿಯೂತ ಕಡಿಮೆ ಮಾಡುವುದಕ್ಕೂ ಅಲೊವೇರಾ ಸೂಪರ್ ಮೆಡಿಸಿನ್.
ತಲೆಹೊಟ್ಟಿನ ಸಮಸ್ಯೆ ಕಡಿಮೆ ಮಾಡುವುದರ ಜೊತೆಗೆ ಕೂದಲು ಸೊಂಪಾಗಿ ಬೆಳೆಯಲು, ಕೂದಲಿನ ಆರೈಕೆಯ ದೃಷ್ಟಿಯಿಂದಲೂ ಅಲೊವೆರಾ ಬಳಕೆ ಸೂಕ್ತ. ಅಲೊವೆರಾ ಗಿಡದ ಎಲೆಯೊಳಗಿನ ಜೆಲ್ ತೆಗೆದು ನಿಯಮಿತವಾಗಿ ಹಚ್ಚುತ್ತಾ ಬಂದಲ್ಲಿ ಕೂದಲಿನ ಆರೋಗ್ಯ ಸಹ ವೃದ್ಧಿಸುತ್ತದೆ.
ಅಲೊವೆರಾ ಜ್ಯೂಸ್ ಕುಡಿಯುವುದರಿಂದ ಜೀರ್ಣ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಜೊತೆಗೆ ದೇಹಕ್ಕೆ ಅಗತ್ಯವಾದ ವಿಟಾಮಿನ್ಗಳು, ಖನಿಜಗಳನ್ನು ಲೋಳೆರಸ ಒದಗಿಸುತ್ತದೆ. ಸಸ್ಯದಲ್ಲಿ ಎ, ಸಿ, ಇ, ಮತ್ತು ಬಿ 12 ಜೀವಸತ್ವಗಳಿವೆ. ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಅಗತ್ಯ ಖನಿಜಗಳನ್ನು ಸಹ ಒಳಗೊಂಡಿದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬುತ್ತದೆ. ದೇಹ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಅಲೊವೆರಾದ ರಸ ಸೇವಿಸಿದರೆ ಮಲಬದ್ಧತೆ ಶಮನವಾಗುತ್ತದೆ. ಮಧುಮೇಹ ನಿಯಂತ್ರಣದ ದೃಷ್ಟಿಯಿಂದಲೂ ಅಲೊವೆರಾ ಜೆಲ್ ಪರಿಣಾಮಕಾರಿ ಫಲ ನೀಡುತ್ತದೆ. ಒತ್ತಡದಿಂದ ಬಳಲುತ್ತಿರುವ ದೇಹಕ್ಕೆ ವಿಶ್ರಾಂತಿ ಒದಗಿಸುವ ಕೆಲಸವನ್ನು ಅಲೊವೆರಾ ರಸ ಮಾಡುತ್ತದೆ.
ಇಂತಹ ಬಹುಪಯೋಗಿ, ಬಹು ಪ್ರಯೋಜನಕಾರಿ ಅಲೊವೆರಾ ನಿಮ್ಮ ತೈತೋಟದಲ್ಲೂ ಇರಲಿ.

