ಬ್ರಹ್ಮಾವರ: ಅಸಮರ್ಪಕ ಕಾರ್ಯವೈಖರಿ ಹಾಗೂ ಭ್ರಷ್ಟಾಚಾರ ಮೊದಲಾದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬ್ರಹ್ಮಾವರ ತಹಶೀಲ್ದಾರರ ಕಚೇರಿಗೆ ತನಿಖೆಗಾಗಿ ಆಗಮಿಸಿದ್ದು, ಎರಡನೇ ದಿನವಾದ ಮಂಗಳವಾರ ಕೂಡ ದಿನಪೂರ್ತಿ ತಪಾಸಣೆ ನಡೆಸಿದ್ದಾರೆ.
ಶೋಧನಾ ವಾರಂಟ್ ಪಡೆದು ದಾಳಿ
ಸಾರ್ವಜನಿಕರಿಂದ ಬಂದ ವ್ಯಾಪಕ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಕಚೇರಿ ಬೆಂಗಳೂರು ಅವರಿಂದ ಶೋಧನಾ ವಾರಂಟ್ ಪಡೆದು ಈ ತನಿಖೆ ಮತ್ತು ತಪಾಸಣೆಯನ್ನು ಕೈಗೊಳ್ಳಲಾಗಿದೆ. ಮಂಗಳವಾರ ರಾತ್ರಿ ತನಕವೂ ಈ ಸುದೀರ್ಘ ತಪಾಸಣೆ ಮುಂದುವರಿದಿತ್ತು ಎಂದು ತಿಳಿದುಬಂದಿದೆ.
ರಾಶಿ ರಾಶಿ ಕಡತಗಳು ಪತ್ತೆ
ಲೋಕಾಯುಕ್ತ ಅಧಿಕಾರಿಗಳ ಈ ದಿಢೀರ್ ತಪಾಸಣೆಯ ವೇಳೆ ಕಚೇರಿಯಲ್ಲಿ ವಿಲೇವಾರಿಗೆ ಬಾಕಿಯಿರುವ ಕಡತಗಳು ಹಾಗೂ ನಿಯಮಬಾಹಿರವಾಗಿ ವಿಲೇವಾರಿ ಮಾಡಿರುವುದಾಗಿ ಶಂಕಿಸಲಾದ ರಾಶಿ ರಾಶಿ ಕಡತಗಳು ಪತ್ತೆಯಾಗಿವೆ. ಪ್ರಮುಖವಾಗಿ ಮಧ್ಯವರ್ತಿಗಳ (ಬ್ರೋಕರ್ಗಳ) ಮೂಲಕ ಕಡತಗಳ ವಿಲೇವಾರಿಯಾಗುತ್ತಿರುವುದು ಹಾಗೂ ಕಾನೂನು ಬಾಹಿರವಾಗಿ ಕಡತಗಳ ವಿಲೇವಾರಿ ಮಾಡಿರುವ ಬಗ್ಗೆಯೂ ಲೋಕಾಯುಕ್ತರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಯಾವುದೇ ಸೂಕ್ತ ಸಕಾರಣವಿಲ್ಲದೆ ಕಡತಗಳ ವಿಲೇವಾರಿ ತಡವಾಗುತ್ತಿರುವುದು ಈ ವೇಳೆ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಾರ್ವಜನಿಕರ ಅಳಲು:
ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಕಚೇರಿಗೆ ಧಾವಿಸಿದ ಕೆಲವು ಸಾರ್ವಜನಿಕರು, ಲೋಕಾಯುಕ್ತ ಅಧಿಕಾರಿಗಳ ಮುಂದೆ ತಮಗಾಗುತ್ತಿರುವ ತೊಂದರೆ ಹಾಗೂ ಸಮಸ್ಯೆಗಳನ್ನು ಹೇಳಿಕೊಂಡು ಅಳಲು ತೋಡಿಕೊಂಡರು. ಈ ದೂರುಗಳ ಬಗ್ಗೆಯೂ ಅಧಿಕಾರಿಗಳು ಸ್ಥಳದಲ್ಲೇ ವಿಚಾರಣೆ ನಡೆಸಿದರು.
ಲೋಕಾಯುಕ್ತರಿಗೆ ವರದಿ ಸಲ್ಲಿಕೆ
ಕಚೇರಿಯಲ್ಲಿ ಕಾನೂನುಬಾಹಿರವಾಗಿ ಕಂಡುಬಂದ ಎಲ್ಲಾ ಕಡತಗಳ ಬಗ್ಗೆ ಈಗಾಗಲೇ ವಿಸ್ತೃತ ವರದಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದನ್ನು ಉನ್ನತ ಲೋಕಾಯುಕ್ತರಿಗೆ ನೀಡಲಾಗುವುದು. ಅವರು ಈ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಿದ್ದಾರೆ ಎಂದು ತನಿಖಾ ನಿರತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಪ್ರಮುಖ ಕಾರ್ಯಾಚರಣೆಯ ನೇತೃತ್ವವನ್ನು ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಹಾಲಮೂರ್ತಿ ರಾವ್ ವಹಿಸಿದ್ದರು. ತಂಡದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಮಂಜುನಾಥ್ ಮತ್ತು ರಾಜೇಂದ್ರ ನಾಯ್ಕ್, ಮಂಗಳೂರು ಲೋಕಾಯುಕ್ತ ಇನ್ಸ್ಪೆಕ್ಟರ್ ಭಾರತಿ ಸೇರಿದಂತೆ ಉಡುಪಿ ಹಾಗೂ ಮಂಗಳೂರು ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

