ಮಂಗಳೂರು: ನಗರದ ಕಂಕನಾಡಿ ನಾಗುರಿ ಸಮೀಪ ದುರಂತವೊಂದು ಸಂಭವಿಸಿದ್ದು, ದರೆ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮೃತಪಟ್ಟವರು ಬಿಹಾರ ಮೂಲದವರಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಇಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಕೃತಕ ನೆರೆ ಪರಿಸ್ಥಿತಿ ಉಂಟಾಗಿದೆ. ನಿರಂತರ ಮಳೆಯ ಪರಿಣಾಮವಾಗಿ ನಾಗುರಿಯಲ್ಲಿರುವ ಕಂಕನಾಡಿ ನಗರ ಠಾಣೆ ಸಮೀಪದ ಹಳೆಯ ಮನೆಯೊಂದರ ಮೇಲ್ಭಾಗದ ದರೆ ಕುಸಿದು ಮನೆ ಮೇಲೆ ಬಿದ್ದಿದೆ.

ಈ ದುರ್ಘಟನೆಯಲ್ಲಿ ಮನೆಯೊಳಗಿದ್ದ ನಾಲ್ವರು ಮಣ್ಣಿನಡಿ ಸಿಲುಕಿಕೊಂಡಿದ್ದರು. ಇವರಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿರುವುದು ದೃಢಪಟ್ಟಿದೆ. ಘಟನೆಯಲ್ಲಿ ಸಿಲುಕಿದ್ದ ಉಳಿದ ಮೂವರನ್ನು ರಕ್ಷಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ, ಎಸ್ಡಿಆರ್ಎಫ್ ಮತ್ತು ಪೊಲೀಸ್ ಸಿಬ್ಬಂದಿ ದೌಡಾಯಿಸಿದ್ದು, ಮಣ್ಣಿನ ತೆರವು ಕಾರ್ಯಾಚರಣೆ ಮುಂದುವರಿದಿದೆ. ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರಿದಿದೆ.

