ಉಡುಪಿ: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಕೇಬಲ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮೃತರನ್ನು ರಾಜೀವ ನಗರ ನಿಟ್ಟೂರು ನಿವಾಸಿ ನಿಟ್ಟೂರಿನ ಹನುಮಂತನಗರ ವಾಲಿಬಾಲ್ ಫ್ರೆಂಡ್ಸ್ (VBF) ನ ಸಕ್ರೀಯ ಸದಸ್ಯ ಗಣೇಶ್ ಪಾಲನ್ (42) ಎಂದು ಗುರುತಿಸಲಾಗಿದೆ. ಅವರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು, ಕೇಬಲ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಘಟನೆಯ ಹಿನ್ನೆಲೆ:
ಜುಲೈ 17ರಂದು ರಾತ್ರಿ 9:05ರ ಸುಮಾರಿಗೆ ಗಣೇಶ್ ಅವರು ಕೆಲಸ ಮುಗಿಸಿ ಆದಿಉಡುಪಿ ಕೇಬಲ್ ಕಚೇರಿ ಬಳಿ ತಮ್ಮ KA-20-HJ-5938 ಸಂಖ್ಯೆಯ ಮೋಟಾರು ಸೈಕಲ್ನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಸ್ಕಿಡ್ ಆಗಿ ಬಿದ್ದಿದ್ದರು. ಆದರೆ, ಅಪಘಾತದ ಬಳಿಕ ಅವರು ಯಾವುದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ.

ಮರುದಿನ ಬೆಳಿಗ್ಗೆ ಎದೆನೋವು:
ಜುಲೈ 18ರಂದು ಬೆಳಿಗ್ಗೆ 7:00 ಗಂಟೆಯ ಸುಮಾರಿಗೆ ಗಣೇಶ್ ಅವರಿಗೆ ಲಘು ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರ ಪತ್ನಿ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ದಾರಿ ಮಧ್ಯೆ ಗಣೇಶ್ ಅವರ ಬಾಯಿಯಿಂದ ನೊರೆ ಬಂದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ.
ಆಸ್ಪತ್ರೆಗೆ ತಲುಪಿದ ತಕ್ಷಣ ವೈದ್ಯರು ತಪಾಸಣೆ ನಡೆಸಿದರಾದರೂ, ಬೆಳಿಗ್ಗೆ 8:10ರ ವೇಳೆಗೆ ಗಣೇಶ್ ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬೈಕ್ನಿಂದ ಬಿದ್ದಾಗ ಆದ ಆಂತರಿಕ ಪೆಟ್ಟಿನಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸ್ ದೂರು ದಾಖಲು:ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 45/2026, ಕಲಂ: 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

