ಉಡುಪಿ: ಮಣಿಪಾಲದಲ್ಲಿ ಜೂನ್ 24ರಂದು ನಡೆದ ಪ್ರತಿಭಟನೆ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ, ಸಾರ್ವಜನಿಕ ಶಾಂತಿ ಭಂಗ ಹಾಗೂ ಪ್ರಧಾನಮಂತ್ರಿಯವರ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸಿ, ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ಮನವಿ ಸಲ್ಲಿಸಿದೆ.
ನಗರ ಯುವಮೋರ್ಚಾ ಅಧ್ಯಕ್ಷ ಶ್ರೀವತ್ಸ ಅವರ ನೇತೃತ್ವದಲ್ಲಿ ಎಸ್ಪಿಯನ್ನು ಭೇಟಿ ಮಾಡಿದ ನಿಯೋಗ, ಪ್ರತಿಭಟನೆಯಲ್ಲಿ ನಡೆದ ಘಟನೆಗಳ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮಾತನಾಡಿ, ಮಣಿಪಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಸೇರಿದಂತೆ ಹಲವು ಕಾನೂನುಬಾಹಿರ ಕೃತ್ಯಗಳು ನಡೆದಿವೆ ಎಂದು ಆರೋಪಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಎಫ್ಐಆರ್ ದಾಖಲಿಸಬೇಕು. ಇಲ್ಲವಾದಲ್ಲಿ ಮಣಿಪಾಲ ಪೊಲೀಸ್ ಠಾಣೆ ಎದುರು ಬಿಜೆಪಿ ಯುವಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣೇಶ್, ನಗರ ಯುವಮೋರ್ಚಾ ಉಪಾಧ್ಯಕ್ಷರಾದ ನಿಖಿಲ್ ಮಡಿವಾಳ, ಭೂಷಣ್ ಕುಮಾರ್, ಶ್ರೀಕಾಂತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಿತಿನ್ ಪೈ, ಪ್ರಸಾದ್ ಗ್ಯಾಂಸ್ಕರ್, ಕಾರ್ಯದರ್ಶಿ ಹರ್ಷರಾಜ್, ಧನುಷ್ ಕಡಿಯಾಳಿ ಹಾಗೂ ದೀಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.

