ಉಡುಪಿ: ರಾಷ್ಟ್ರೀಯವಾದಿ ಶಾಸಕ ಯಶ್ಪಾಲ್ ಸುವರ್ಣ ಅವರ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಪಿತೂರಿ ನಡೆಸುತ್ತಿದ್ದು, ಎಫ್ಐಆರ್ ದಾಖಲಿಸಿ ಅವರನ್ನು ಹೆದರಿಸುವ ಭ್ರಮೆಯಲ್ಲಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಯಶ್ಪಾಲ್ ಸುವರ್ಣ ಅವರು ಕಾಲೇಜು ದಿನಗಳಿಂದಲೇ ಹೋರಾಟದ ಹಿನ್ನೆಲೆಯಿಂದ ಬಂದವರಾಗಿದ್ದು, ಹಿಂದೂ ಸಂಘಟನೆಗಳ ಮೂಲಕ ಯಶಸ್ವಿ ನಾಯಕನಾಗಿ ಬೆಳೆದು, ಇಂತಹ ನೂರಾರು ಸುಳ್ಳು ಪ್ರಕರಣಗಳನ್ನು ಧೈರ್ಯವಾಗಿ ಎದುರಿಸಿ ಶಾಸಕರಾಗಿ ಆಯ್ಕೆಯಾದವರು ಎಂದು ಸ್ಮರಿಸಿದರು.
ಒಂದು ವೇಳೆ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಅವರನ್ನು ಬಂಧಿಸಲು ಯತ್ನಿಸಿದರೆ, ಇಡೀ ಜಿಲ್ಲೆಯ ಯುವಜನತೆ ಅವರ ಪರವಾಗಿ ಬೀದಿಗಿಳಿಯಲಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾದರೆ ಅದಕ್ಕೆ ಆಡಳಿತ ಪಕ್ಷವೇ ನೇರ ಹೊಣೆಯಾಗಬೇಕಾಗುತ್ತದೆ ಮತ್ತು ಮುಂದಿನ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

