ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಆಗಸ್ಟ್ ತಿಂಗಳು ಆರಂಭವಾಗುತ್ತದೆ. ಆಗಸ್ಟ್ ಎಂದರೆ ಎಲ್ಲರಿಗೂ ನೆನಪಾಗುವುದು ಸ್ವಾತಂತ್ರ್ಯ ದಿನಾಚರಣೆ. ರಾಜ್ಯದಲ್ಲೂ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವನ್ನು ಭರ್ಜರಿಯಾಗಿಯೇ ಆಚರಣೆ ಮಾಡಲಾಗುತ್ತದೆ.
ಸ್ವಾತಂತ್ರ್ಯ ದಿನದಂದು ರಾಜ್ಯದಲ್ಲಿ ಮನಸ್ಸಿಗೆ ಮುದ ನೀಡುವ ಒಂದು ಕಾರ್ಯಕ್ರಮ ಪ್ರತಿವರ್ಷವೂ ನಡೆಯುತ್ತದೆ. ಅದುವೇ ಬೆಂಗಳೂರಿನ ಲಾಲ್ಭಾಗ್ನಲ್ಲಿ ಫಲಪುಷ್ಪ ಪ್ರದರ್ಶನ (ಫ್ಲವರ್ ಶೋ).
ಈ ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತವೂ ಬೆಂಗಳೂರಿನ ಪುಷ್ಪಕಾಶಿ ಎಂದೇ ಹೆಸರು ಪಡೆದಿರುವ ಲಾಲ್ಭಾಗ್ನಲ್ಲಿ ಆ. 6 ರಿಂದ ತೊಡಗಿದಂತೆ ಹತ್ತು ದಿನಗಳ ಕಾಲ ಫ್ಲವರ್ ಶೋ ನಡೆಯಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನ ‘ರಾಜ್ಯದ ಮೊದಲ ಸಾಮ್ರಾಜ್ಯ ಗಂಗ ರಾಜವಂಶ’ ದ ಪರಿಕಲ್ಪನೆಯಲ್ಲಿ ಈ ಶೋ ಆಯೋಜನೆ ಮಾಡಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.
ಗಂಗ ರಾಜವಂಶದ ಚರಿತ್ರೆ, ಅವರು ಶಿಕ್ಷಣ, ಸಾಹಿತ್ಯ, ನೀರಾವರಿ, ಶಿಲ್ಪಕಲೆಗೆ ನೀಡಿದ ಕೊಡುಗೆಗಳನ್ನು ಈ ಬಾರಿಯ ಫ್ಲವರ್ ಶೋ ನಲ್ಲಿ ನೋಡಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಈ ಥೀಮ್ ಪ್ರಕಾರವೇ ಉದ್ಯಾನವನ್ನು ಸಿಂಗಾರ ಮಾಡುವ ಕೆಲಸವೂ ಸದ್ಯ ಆರಂಭವಾಗಿದೆ. ಆಲಂಕಾರಿಕ ಗಿಡಗಳು, ಬಗೆ ಬಗೆಯ ಬಣ್ಣ ಬಣ್ಣದ ಹೂಗಳು, ಪಾಟ್ನಲ್ಲಿ ತರಕಾರಿ ಗಿಡಗಳನ್ನು ಬೆಳೆಸಲಾಗುತ್ತದೆ. ಗಾಜಿನ ಮನೆಯಲ್ಲಿ ವಿಶೇಷ ಆಕರ್ಷಣೆಯ ಚಿತ್ರಣಗಳನ್ನು ಮೂಡಿಸುವ ಕೆಲಸಗಳು ಭರದಿಂದ ಸಾಗುತ್ತಿವೆ.
ಅಚ್ಚ ಕನ್ನಡಿಗರಾಗಿದ್ದ ಗಂಗರ ಇತಿಹಾಸವನ್ನು ಪಚ್ಚೆ ಹಸಿರಿನಲ್ಲಿ, ಬಣ್ಣ ಬಣ್ಣದ ಹೂ ಹಣ್ಣುಗಳ ಮೂಲಕ ಮೂಡಿಸಲು ಹೊರಟಿರುವ ತೋಟಗಾರಿಕಾ ಇಲಾಖೆಯ ಶ್ರಮಕ್ಕೆ ಮೆಚ್ಚುಗೆ ಸೂಚಿಸಲೇ ಬೇಕು.

