ಈ ಆಧುನಿಕ ಯುಗದಲ್ಲಿ ಮನುಷ್ಯ ಒತ್ತಡದ ಜೀವನವನ್ನು ನಡೆಸುತ್ತಿರುತ್ತಾನೆ. ಒಂಥರಾ ಯಾಂತ್ರಿಕ ಬದುಕು. ಜಂಜಾಟ, ಅವಸರ, ಒತ್ತಡದ ಜೀವನಶೈಲಿ ಆರೋಗ್ಯದ ಮೇಲೆ ಕೂಡಾ ಅಡ್ಡ ಪರಿಣಾಮ ಬೀರುತ್ತದೆ. ತಲೆನೋವು ಎಲ್ಲರನ್ನೂ ಬಾಧಿಸುವಂತಹ ಒಂದು ಸಾಮಾನ್ಯ ಆರೋಗ್ಯ ಸಮಸ್ಯೆ. ಆದರೆ ಇತ್ತೀಚೆಗೆ ಮೈಗ್ರೇನ್ ಅನ್ನುವಂತದ್ದು ಕಾಮನ್ ಶಬ್ಧವಾಗಿ ಬಿಟ್ಟಿದೆ. ಅನೇಕ ಜನರಿಗೆ ಈ ಬಗ್ಗೆ ತಪ್ಪು ಆಲೋಚನೆಗಳಿವೆ.
ಮೈಗ್ರೇನ್ ಗೂ ಮತ್ತು ಸಾಮಾನ್ಯ ತಲೆನೋವಿಗೂ ಅಜಗಜಾಂತರ ವ್ಯತ್ಯಾಸವಿದೆ. ಮೈಗ್ರೇನ್ ಅನ್ನುವಂತದ್ದು ಒಂದು ನರವೈಜ್ಞಾನಿಕ ಅಸ್ವಸ್ಥತೆಯಾಗಿದೆ. ಇದರ ಲಕ್ಷಣಗಳೆಂದರೆ ತೀವ್ರ ಆಯಾಸ, ತಲೆ ಹಿಂಬದಿಯಲ್ಲಿ ಹೆಚ್ಚು ನೋವು, ಆತಂಕ, ನಿದ್ರಾ ಸಮಸ್ಯೆ, ವಾಕರಿಕೆ ಅಥವಾ ವಾಂತಿ, ಮನಸ್ಥಿತಿಯಲ್ಲೂ ಬದಲಾವಣೆ, ಮುಂಗೋಪ, ತಲೆ ತಿರುಗುವಿಕೆ ಇತ್ಯಾದಿ. ಇವೆಲ್ಲ ಲಕ್ಷಣಗಳು ಒಮ್ಮೆಲೆ ಅನುಭವಕ್ಕೆ ಬಾರದಿದ್ದರೂ ಕ್ರಮೇಣ ಗೋಚರಕ್ಕೆ ಬರುತ್ತದೆ.
ಸಾಮಾನ್ಯ ತಲೆನೋವು ಒತ್ತಡ, ಹವಾಮಾನ ವೈಪರೀತ್ಯ ಅಥವಾ ಇನ್ನಿತರ ಕಾರಣದಿಂದ ಶುರುವಾಗುತ್ತದೆ. ಆದರೆ ಮೂರು ದಿನದ ಬಳಿಕವೂ ತಲೆನೋವು ಕಾಣಿಸಿಕೊಂಡರೆ ಜ್ವರ, ಕತ್ತು ನೋವು, ನರಮಂಡಲದ ಸಮಸ್ಯೆ ಉಲ್ಬಣವಾಗುತ್ತದೆ.
ಮೈಗ್ರೇನ್ ಸಮಸ್ಯೆಯನ್ನು ಕಡೆಗಣಿಸದೆ ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದಕ್ಕೆ ಪೂರಕವಾದ ಔಷಧಿಗಳು ಲಭ್ಯವಿದೆ. ಆಯುರ್ವೇದದಲ್ಲೂ ಇದಕ್ಕೆ ಸಲಹೆಗಳಿವೆ. ಆದಷ್ಟು ಒತ್ತಡದ ಜೀವನಶೈಲಿಯಲ್ಲಿ ಧ್ಯಾನ, ವಾಕಿಂಗ್, ಯೋಗ, ಹಿತ ಸಂಗೀತ ಆಲಿಸುವುದು ಇತ್ಯಾದಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಉತ್ತಮ.

